Monday, July 13, 2009

ಮೀನು


ಜಲಸಂಕುಲದಲಿ
ವಿಕಸನ ಸಂಕೋಲೆ
ಅದಮ್ಯ ಕೊಂಡಿಯಲಿ
ಮಿಂದು ಬಂದುದು ಮೀನು.

ಜಲಜನನ
ಜಲನಯನ
ಜಲಜೀವನ
ಜಲಜಾಕ್ಷಿ ಮೀನು.

ಸುತ್ತಿಬರುತಲಿ
ತತ್ತಿಯಿಡಿತಲಿ
ಬಿತ್ತಿ ವಂಶವ
ಜಲಮಹತು ಮೀನು.

ಬೆನ್ನು ಮೂಳೆಯ
ಬೆನ್ನು ಹಿಡಿದರೆ
ನರ ಬೇರುತೋರುವ
ಜಲೋಗಾಮಿ ಮೀನು.

ಕೊಳವಿರಲಿ
ಕೆರೆಬರಲಿ
ನದಿ ಸೇರಿ
ಸಾಗಿ ಸಾಗರ
ಎಲ್ಲ-ಸಲ್ಲ ಮೀನು.

ನಿನ್ನೆಯ ಹಾದು ಬಂದಬೀದಿ,
ನಾಳೆಗೆ ತೋರು ಬರುವರಿಗೆ ಹಾದಿ
ಕಲಕಿರಾಡಿಯಿರೆ ನೀರು
ಅದತೊರೆದು ಬೇರೆಡೆ ಸೇರು
ಸರಾಗ ಗಮನ ನಯವ ಕಲಿ
ವಿರಾಗ ಬಿಡು ಮೀನಂತೆ ನಲಿ
ದಾಹ, ಹರಿದುಸಿರು ಮರೆಯದಿರು ನೀರು
ರಾಡಿಮಾಡದಿರು ಕುಡಿವುದು ಬೇರು
ಜಲನಯನಕೆ ಜಲವೇ ಜೀವ,
ತರುವುದು ಮನುಕಲಕೆ ತಪ್ಪಿನಡೆದರೆ ಸಾವ.

5 comments:

  1. ಜಲನಯನ,
    ಮೊದಲು ಮೀನಿನ ಸುಂದರ ಚಿತ್ರವನ್ನು ನೋಡಿ ಬೆರಗಾದೆ. ಬಳಿಕ ಸುಂದರ ಕವನವನ್ನು ಓದಿ ಇನ್ನಷ್ಟು ಖುಶಿಯಾಯಿತು. ನಮ್ಮ ಪೂರ್ವಜರು ಗಣಿತ, ವಿಜ್ಞಾನ
    ಎಲ್ಲವನ್ನೂ ಕಾವ್ಯದಲ್ಲಿಯೇ ರಚಿಸುತ್ತಿದ್ದರೆಂದು ಕೇಳಿದ್ದೇನೆ. ನೀವೂ ಸಹ ಅಂತಹದೇ
    ಸಾಹಸವನ್ನು ಮಾಡಿರುವಿರಿ ಎಂದು ಹೇಳಬೇಕಾಗುತ್ತದೆ.

    ReplyDelete
  2. ಸುನಾಥ್ ಸರ್, ನಿಮ್ಮ ಪ್ರಥಮಗಳಿಗೆ ನಾನು ಆಭಾರಿ, ಪ್ರತಿ ಪೋಸ್ಟ್ ಗೂ ನಿಮ್ಮದೇ ಪ್ರಥಮ ಪ್ರಿತಿಕ್ರಿಯೆ, ಪ್ರೋತ್ಸಾಹಕ್ಕೆ ಧನ್ಯವಾದಗಳು..ಮತ್ಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಐದಾರು ಲೇಖನಗಳನ್ನು ಕನ್ನಡದ ಡೈಜಸ್ಟ್ ಎಂದೇ ಖ್ಯಾತಿಪಡೆದ ಕಸ್ತೂರಿಯಲ್ಲಿ ಬರೆದಿದ್ದೇನೆ (ರವಿಬೆಳಗೆರೆತವರು ಅಲ್ಲಿದ್ದಾಗಿನ ಸಮಯ)...ಕಾರಣಾಂತರಗಳಿಂದ ಅದು ಮುಂದುವರೆಯಲಿಲ್ಲ, ಬ್ಲಾಗಿನ ಮೂಲಕ ಪ್ರಯತ್ನ...
    thanks ನಿಮ್ಮ ಪ್ರತಿಕ್ರಿಯೆಗೆ

    ReplyDelete
  3. ಜಲನಯನ ಸರ್,

    ಮೀನಿನ ಚಿತ್ರದ ಜೊತೆಗೆ ಸುಂದರ ಕವನವನ್ನು ಬರೆದಿದ್ದೀರಿ ಇನ್ನೂ ಯಾವ ವಿಚಾರದಲ್ಲಿ ಕವನ ಬರೆಯಬೇಕೆಂದು ತಾಖೀತು ನಡೆಸುತ್ತಿದ್ದೀರಿ...

    ReplyDelete
  4. ಶಿವು ನಾನು ಬೇರೆ ಯಾವುದೇ ವಿಚಾರ ಕವನ ಬರೆಯದೇ ಇದ್ದರೂ ಮೀನಿನ ಬಗ್ಗೆ ಬರೆಯುವುದು ನನ್ನ ಉದ್ದ್ಯೇಶ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ್ದು. ನನ್ನ ವ್ಯಾಸಂಗದ ಸಂಗಾತಿ ಮೀನು ಮತ್ತು ಜಲ. ಅದ್ಕೇ ‘ಜಲನಯನ‘...ಏನಂತೀರಿ?? ಮೀನಿನ, ನೀರಿನ ಫೋಟೋಗಳು ನಿಮ್ಮಲ್ಲಿದ್ದರೆ ತಿಳಿಸಿ..ನನ್ನ ಭಾವ ಮಂಥನಕ್ಕೆ...ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

    ReplyDelete
  5. ನಿಮ್ಮ ಮೀನನ್ನು ನೋಡಿ ನನ್ನ ಮೀನುಗಳು ನೆನಪಾದವು.. ಅವನ್ನು ನೋಡುತ್ತಾ ಇದ್ರೆ ಸಮಯದ ಅರಿವೆ ಇರುವುದಿಲ್ಲ....
    ನಿಮ್ಮಿಂದ ಒಂದು ಹೆಲ್ಪ್ ಬೇಕಿತ್ತಲ್ಲ.. ನನ್ನ aquarium ನಲ್ಲಿ ಮೀನುಗಳು ಸಾಯದೇ ಉಳಿಯಕ್ಕೆ ನಾನು ಏನು ಮಾಡಬೇಕು???

    ReplyDelete