Wednesday, April 6, 2011

ಚಿತ್ರ ಕೃಪೆ: ಮಿತ್ರ ಪ್ರಕಾಶನ ಬ್ಲಾಗ್ (ಛಾಯಾ ಚಿತ್ತಾರ)

ಮೇಘವಾಗಲು ಸಾರ್ಥಕ ಇಳೆಗೆ

ಮೇಘಕೊಂದು ಆಗಲಿದೆ ಮೇಘದ ಸವಾಲು
ಕಪ್ಪು ಮೋಡ ಕೇಳಿತು ಬಿಳಿಮೋಡದ ಅಹವಾಲು
ನೀನು ತುಂಬಿಕೊಂಡು ಕಪ್ಪು ನಾನು ಬರಿದೇ
ಓಲಾಡುತಿರುವೆ ಹಗುರಾಗಿ ಒಂದೆಡೆ ನಿಲ್ಲದೇ

ನೀನಿಲ್ಲೋ ಅಲ್ಲೋ ಎಲ್ಲೋ ಒಂದೆಡೆ ಸುರಿವೆ
ನಾ ಹೀಗೇ ಗಾಳಿಹೋದೆಡೆ ನಿಲ್ಲದೇ ಅಲಿವೆ
ಹೇಳಿ ಬಿಡು ಬಿಟ್ಟು ಕೊಡು ಗುಟ್ಟನಿಂದು ನನಗೆ
ನಾನೂ ನಿನ್ನಂತೆ ಹೇಗಾಗಲಿ ಸಾರ್ಥಕ ಇಳೆಗೆ

ಮನದುಗುಡ ಬಿಚ್ಚಿ ಕಪ್ಪು ಹೇಳಿತು, ಬಿಳಿಯಾ
ಅಯ್ಯೋ ತುಂಬಿದೆ ಕಲ್ಮಶ ನನ್ನಲಿ ಗೆಳೆಯಾ
ಮನುಜ ಬಲು ಲಾಲಸಿ ಬಿಡಲಿಲ್ಲ ನನ್ನನೂ
ಬಿಳುಪಾಗಿರುವೆ ಹಾಗೇ ಇರು ಬಿಡವೊಲ್ಲ ನಿನ್ನನೂ

ನನಗೊಮ್ಮೆ ಹೋಗಬೇಕಿದೆ ನೆಲಕೆ ಕೆಳಗೆ
ಹನಿಯಾಗಿ ತುಂತುರಿಸಿ ಹನಿಸಿ ಅನ್ನಬೆಳೆಗೆ
ಕಪ್ಪಾದರೂ ಪರವಿಲ್ಲ ಹರಿದು ಸೇರಿ ಜಲಾಶಯ
ಬಿಸಿಗೆ ಧಗೆಗೆ ತಣಿಸಿ ಆವಿಯಾದರೂ ಇಲ್ಲ ಭಯ

ನಿಸರ್ಗ ನಿಯಮವಿದು ದಾಳಗಳು ನಾನು ನೀನು
ಹೂವೆಂದು ಮುಟ್ಟದೇ ಮಧುಹೀರದೇ ಜೇನು?
ಸೊಳ್ಳೆಯ ಕಪ್ಪೆ ಅದನು ಹಾವು ಮೇಲಿಲ್ಲವೇ ಹದ್ದು?
ಜೀವಿಗಳು, ಬಾಳುವುದು ನಿಯಮ ಅವಕಿಲ್ಲವೇ ಜಿದ್ದು?