Friday, January 28, 2011


Foto: Global Herald

ಕೃಷಿ-ಕೃಷಿಕ ಮತ್ತು ವ್ಯವಸ್ಥೆ


ನಾರಾಯಣ ರೆಡ್ಡಿಯವರ ಸಾವಯವ ಕೃಷಿ ಮತ್ತು ಅವರ ಕೃತಿ ಬಿಡುಗಡೆ ಸಂಬಂಧಪಟ್ಟ ಲೇಖನಗಳ ಬ್ಲಾಗ್ಗಳನ್ನು ನೋಡಿ ಪ್ರೇರಿತನಾಗಿ ಈ ಲೇಖನ ಬ್ಲಾಗಿಸುತ್ತಿದ್ದೇನೆ. ಸಾವಯವ ಕೃಷಿ ಅಥವಾ ಪೂರ್ಣ ರಾಸಾಯನಿಕಗಳ ಬಳಕೆ ಎರಡನ್ನೂ ನಮ್ಮ ಇಂದಿನ ವ್ಯವಸ್ಥೆ ಮತ್ತು ಕೃಷಿಭೂಮಿಯ ಸ್ಥಿತಿಗಳ ಹಿನ್ನೆಲೆಯಲ್ಲಿ ಸಮಗ್ರವೆನ್ನಲಾಗದು. ಒಂದೆಡೆ ಕಾಡು ನಾಶವಾಗುತ್ತಿದೆ.. ಕಾರಣ ಮಾನವನ ವಸತಿ ಮತ್ತಿತರ ಅವಶ್ಯಕತೆಗೆ..ಅತಿ ಆಸೆಗೆ..!! ತತ್ಪರಿಣಾಮ ಕ್ರಿಮಿ ಕೀಟಗಳಿಗೆ ಆಹಾರ ಆಶ್ರಯಗಳ ಕೊರತೆ..ಅವಕ್ಕೆ ಸುಲಭದ ತುತ್ತು ಬೆಳೆಗಳು..!! ಹಾಗಾಗಿ ಬೆಳೆ ರಕ್ಷಣೆಗೆ ರಾಸಾಯನಿಕಗಳ ಬಳಕೆ ಅನಿವಾರ್ಯವಾಗಿತ್ತು. ಹಸಿರುಕ್ರಾಂತಿಯ ಮೊದಲ ಧ್ಯೇಯವೇ ಬೆಳೆಯುತ್ತಿದ್ದ ಜನಸಂಖ್ಯೆಗೆ ಪರಿಪೂರ್ಣ ಮತ್ತು ಸಾಕಷ್ಟು ಆಹಾರದ ಪೂರೈಕೆಯಾಗಿತ್ತು, ಆಗ ಆಹಾರದ ಕೊರತೆಯಿದ್ದದ್ದು ಸತ್ಯ.. ೧೯೪೩ರ ಭಯಂಕರ ಬಂಗಾಲದ ಬರಗಾಲದ ಕಟು ಸತ್ಯ ನಮ್ಮ ಮುಂದಿದೆ. ಇಲ್ಲಿ ವಿಜ್ಞಾನದ ದೂಷಣೆಯೂ ಅನಗತ್ಯ ಎನಿಸುತ್ತೆ ಏಕೆಂದರೆ ವಿಜ್ಞಾನ ಆಯಾ ಕಾಲದ ಸಮಸ್ಯೆಗಳ ಅಧಾರದ ಮೇಲೆ ಪ್ರತಿಕ್ರಿಯಿಸುತ್ತದೆ, ಅದಕ್ಕೆ ದೂರಗಾಮಿ ದಿಶೆ ನೀಡಬೇಕಾದ್ದು, ಮತ್ತು ಸಮಗ್ರತೆಯನ್ನು ತರಬೇಕಾದ್ದು ನಮ್ಮ ಯೋಜನೆಗಳಲ್ಲಿ ಅಡಕವಾಗಬೇಕು. ಇನ್ನೊಂದು ನಗ್ನ ಸತ್ಯ ನಾವು ತಿಳಿಯಲೇಬೇಕು..ಎಲ್ಲಾ ರೈತರೂ ಸಾವಯವ ಕೃಷಿ ಮಾಡಿದರೆ ನಮ್ಮ ಆಹಾರೋತ್ಪಾದನೆ ಈಗಿರುವ ಮಟ್ಟವಿರಲಿ ಇದರಲ್ಲಿ ಅರ್ಧದಷ್ಟನ್ನೂ ಸಾಧಿಸಲಾಗದು. ಏಕೆಂದರೆ ಎಲ್ಲಾ ಭೂಮಿಯೂ ಸಾಯವಯ ಮಾತ್ರದಿಂದ ಆಹಾರ ಉತ್ಪಾದಿಸಲಾರದು. ಇಲ್ಲಿ ಗುಣ ವರ್ಧಕಗಳ ಪ್ರಯೋಗ ಅನಿವಾರ್ಯ. ಹಾಗೆಯೇ ಸ್ವಂತ ಸಾಮರ್ಥ್ಯ (ರೋಗರುಜಿನಗಳಿಗೆ ಕಾದಾಡಬಲ್ಲ ಗುಣ) ಎಲ್ಲ ಮಣ್ಣಿನಲ್ಲೂ (ಅದರಲ್ಲೂ ಹದಗೆಟ್ಟ ನಾಗರೀಕತೆಯ ಅವಶ್ಯಕತೆಗಳಿಗೆ ಓಗೊಡುತ) ಕಾಣುವುದಿಲ್ಲ..,, ಹೀಗಾಗಿ ಹಲವಾರು ಅನಿವಾರ್ಯಗಳು ನಮ್ಮನ್ನು ಸಾವಯವಕ್ಕೆ ಪೂರ್ಣಮಾನ್ಯತೆ ನೀಡುವಕ್ರಿಯೆಯಲ್ಲಿ  ತಡೆಯುತ್ತವೆ.

ಪ್ರಾಥಮಿಕ ಅವಶ್ಯಕತೆ ಬೆಳೆಯುತ್ತಿರುವ ಮಾನವ ಸಂತತಿಗೆ ಪೂರ್ಣ ಪ್ರಮಾಣದ ಆಹಾರದ ಪೂರೈಕೆ; ನಂತರ ಪೂರ್ಣ ಪೌಷ್ಠಿಕ ಅಹಾರದ ಪೂರೈಕೆ. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿಯನ್ನು ಎಲ್ಲೆಡೆ ಜಾರಿಗೆ ತರಲಾಗದು, ಹಾಗೊಮ್ಮೆ ತಂದರೂ ಆಹಾರದ ಗುಣಮಟ್ಟವಿರಲಿ ಎರಡು ಹೊತ್ತಿನ ಆಹಾರ ಪೂರೈಕೆ ಸಹಾ ಸಾಧ್ಯವಾಗದು. ಕಾರಣ ಸಾವಯವ ಕೃಷಿಯ ಇಳುವರಿ ನಮ್ಮ ಪ್ರಚಲಿತ ಪದ್ಧತಿಯ ಮಟ್ಟಕ್ಕಿಲ್ಲ ಎನ್ನುವುದು. ಎಲ್ಲಾ ಕೃಷಿಯೋಗ್ಯ ಜಮೀನು ಸಾವಯವ-ಸಮರ್ಥ ಕೃಷಿಗೆ ಯೋಗ್ಯ ಎಂದೂ ಹೇಳಲಾಗದು, ಹಾಗೊಮ್ಮೆ ಇದ್ದರೂ ಅದಕ್ಕೆ ಬೇಕಾಗುವ ಸಾವಯವ ಗೊಬ್ಬರಕ್ಕೆ ಬಹುಶಃ ಈಗಿರುವ ರಾಸುಗಳ ಸಂಖ್ಯೆಯನ್ನು ದ್ವಿಗುಣ, ತ್ರಿಗುಣಮಾಡಬೇಕಾಗುತ್ತದೆ, ಹಾಗೊಮ್ಮೆ ಮಾಡಿದರೂ ಅವಕ್ಕೆ ವಾಸಯೊಗ್ಯ ಕೊಟ್ಟಿಗೆಗೆ ಸ್ಥಳಾವಕಾಶ..??? ಅವುಗಳ ಅಹಾರವೂ ಸಾವಯವ ಅಥವಾ ಅರ್ಧ ಸಾವಯವ ಮೂಲದ್ದಾಗಬೇಕಾದರೂ..ಈಗಿರುವ ಮೇವಿನ ಪ್ರಮಾಣ ದ್ವಿಗುಣವಾದರೂ ಆಗಬೇಕು. ಅದಕ್ಕೆ ಬೇಕಾಗುವ ಮೇವುಬೆಳೆಗೆ ಮತ್ತೆ ಹೆಚ್ಚುವರು ಜಮೀನು, ಅದಕ್ಕೆಂದು ಅರಣ್ಯನಾಶ..ಇದರಿಂದ ಮಣ್ಣಿನ ಸವೆಕಲುಕ್ರಿಯೆ ಹೆಚ್ಚಾಗಿ ಫಲವತ್ತತೆ ನಾಶವಾಗುತ್ತದೆ. ಸಾವಯವ ಗೊಬ್ಬರ ಬಳಕೆ ಮತ್ತು ಕೀಟ ನಾಶಕ ವರ್ಜನೆಯಿಂದ ಆಹಾರೋತ್ಪಾದನೆ ಮಟ್ಟ ಕುಸಿಯುವುದು. ಈ ರೀತಿಯ ಎಲ್ಲಾ ಸಮಸ್ಯೆಗಳು ಎದುರಾಗುತ್ತವೆ.

ಇನ್ನು ಕೃಷಿ ಶಿಕ್ಷಣದ ವಿಷಯಕ್ಕೆ ಬಂದರೆ ಶಿಕ್ಷಣದಲ್ಲಿ ಅವಶ್ಯಕ ಮಾರ್ಪಾಡುಗಳು ಮಾತ್ರ ನಮ್ಮ ಯುವ ಜನರ ಕೃಷಿಪರತೆಯನ್ನು ಹೆಚ್ಚಿಸಬಹುದು. ಶಿಕ್ಷಣ ಪದ್ಧತಿ ಪೂರ್ತಾ ಹದಗೆಟ್ಟಿದೆ...ಕೃಷಿಯಲ್ಲಿ ಸ್ವಾನುಭವಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾದ್ದು ಅನಿವಾರ್ಯ. ರಾಸಾಯನಿಕಗಳ ಬಳಕೆಯ ಸಾಮಾನ್ಯ ಪರಿಚಯ ಮತ್ತು ಪದ್ಧತಿಯನ್ನು ತಿಳಿಸಿಕೊಡಬೇಕಾದ್ದು ನಮ್ಮ ಕರ್ತವ್ಯ. ಹದವಾದ ಮತ್ತು ಮಿತವಾದ ಪ್ರಯೋಗ ಸಹಾ ಮುಖ್ಯ ಅಂಶ. ಕ್ರಿಮಿನಾಶಕಗಳ ಎರಡು-ಮೂರು ಪಟ್ಟು ಬಳಕೆ ಮಾಡುವ ಎಷ್ಟೋ ರೈತರನ್ನು ನಾನು ಖುದ್ದು ಕಂಡಿದ್ದೇನೆ ಅವರಿಗೆ ಹೆಚ್ಚುವರಿಯಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚೆಂದು ತಿಳಿಸಿಯೂ ಇದ್ದೇನೆ... ಈ ತಿಳುವಳಿಕೆ ರೈತಬಾಂಧವರಲ್ಲಿ ಮೂಡಿಸುವುದು ತಿಳಿದವರ ಕರ್ತವ್ಯ.

ನನ್ನ ಪ್ರಕಾರ ಯಾವುದನ್ನೂ ಧಿಡೀರ್ ಮಾಡುವುದರಿಂದ ತೊಂದರೆಗಳೇ ಹೆಚ್ಚು...ನಾರಾಯಣರೆಡ್ಡಿಯವರಂತೆ ಸಾಧ್ಯವಿರುವ ಹಲವಾರು ರೈತರು ಅಲ್ಲಲ್ಲಿ ಸಾಯವಯ ಕೃಷಿಯನ್ನು ಪ್ರಾರಂಭಿಸುವುದು ಕ್ರಮೇಣ ಎಲ್ಲ ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿಪಡಿಸುವುದು ಸಾಧ್ಯ. ಇಲ್ಲಿ ಅರಣ್ಯ ಅಥವಾ ಸಾಮಾಜಿಕ ಅರಣ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಯೂ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಕ್ರಿಮಿಕೀಟಗಳಿಗೆ ಆಶ್ರಯ ದೊರೆತಂತಾಗುತ್ತದೆ.

ನಮ್ಮ ಹಿರಿಯ ರೈತಮಿತ್ರ ನಾರಾಯನ ರೆಡ್ಡಿಯವರಿಗೆ ಶುಭ ಹಾರೈಕೆ ಸಲ್ಲಿಸಿ...ವಿಚಾರ ಮಂಥನಕ್ಕೆ ಅನುವುಮಾಡಿದ  ಲೇಖನವನ್ನು ಬ್ಲಾಗಿಸಿದ ಪರಾಂಜಪೆಯವರನ್ನು ಅಭಿನಂದಿಸುತ್ತೇನೆ.