Tuesday, January 3, 2017

ಮಮತಾಮಯಿ....ಅಕ್ಕ

ಮಮತಾಮಯಿ ಅಕ್ಕ...





ಮಮತಾಮಯಿ....ಅಕ್ಕ

ಮೊದಲಬಾರಿಗೆ ಕೆಲವರನ್ನು ಕಂಡಾಗ ಮುಖ ದರ್ಶನದಲ್ಲೇ ಆಪ್ಯಾಯ ಭಾವ ಮೂಡುತ್ತದೆ, ಅದೇ ಇನ್ನು ಕೆಲವರು ಆಪ್-ಯಾವ ಭಾವ ಮೂಡಿಸುತ್ತಾರೆ. ಕೆಲವರ ಮಾತು ಕೇಳಿದರೆ ಎಂತಹಾ ಸಭ್ಯ ಈತ ಎನಿಸಿದರೆ ಮತ್ತೆ ಕೆಲವರು ಮಾತನಾಡುತ್ತಾ ಹೋದಂತೆ ಈ ಬೇವಿನೆಲೆ ಏಕೆ ಸಿಹಿ ಹಚ್ಚಿಕೊಂಡಿದೆ ? ಎನಿಸುತ್ತೆ. ಕೆಲವರು ಸಿಹಿ ಸಿಹಿ ಮಾತು ಕಂಡಾಗಲೆಲ್ಲಾ... ಆದರೆ ಮೀರ್ ಸಾದಿಕ್ ಇಲ್ಲೇ ಎಲ್ಲೋ ಇದ್ದಾನಲ್ಲಾ...? ಇಲ್ಲಿ ಯಾವುದೋ ಊಸರವಳ್ಳಿ ಇದೆಯಲ್ಲಾ ಎನಿಸುತ್ತದೆ. ಇದೆಲ್ಲಾ ಏಕೆ ಹೇಳುತ್ತಿದ್ದೇನೆ? ಎನಿಸಿರಬಹುದು ನಿಮಗೆಲ್ಲಾ...ಕಾರಣವಿದೆ!!

ಮಿತ್ರ ಮಂಜುನಾಥ್ ನನಗೆ ಅಕ್ಕನ (ಹರಿಣಿ, ಜಿ.ಎನ್.ಟಿ) ಬಗ್ಗೆ ಬರೆದು ಕೊಡಿ ಎಂದಾಗ...ಏನು ಬರೆಯಲಿ..? ಹೇಗೆ ಬರೆಯಲಿ? ಏನಂತ ಬರೆಯಲಿ? ಯಾರು ಅವರಿಗೆ ನಾನು? ನನಗೆ ಅವರು ಯಾರು? ಈ ಎಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡೆ. ಸಿಕ್ಕ ಉತ್ತರವೇ: ಕಾಣದೇ ಇದ್ದೂ ಸಂಪರ್ಕದ ಅಕ್ಕರಗಳಲ್ಲಿ ಅಕ್ಕರೆಯನ್ನು ತುಂಬಿ, ಮನಸನ್ನು ಓದಿರುವವರಂತೆ ಮಿನ್ಸಂದೇಶಿಸಿ, ಎದುರಿಗೆ ಕಂಡಾಗ.... ತಾಯಿಯಂತೆ ಮಮತೆ, ಅಪ್ಪನಂತೆ ಕಾಳಜಿ, ಅಣ್ಣನಂತೆ ರಕ್ಷಣೆ, ಅಕ್ಕನಂತೆ ಮುದ್ದುಗರೆಯುವ, ತಂಗಿ-ತಮ್ಮಂದಿರಂತೆ ಪಲುಕುವ ಅಸಾಮಾನ್ಯ ಗುಣಗಳ ಅಕ್ಕ ಹರಿಣಿ ಅಕ್ಕ.
ನನಗೆ ಮೊದಲ ಆ ದಿನಗಳು ಚನ್ನಾಗಿ ನೆನಪಿವೆ.
ಪದಾರ್ಥ ಚಿಂತಾಮಣಿಯ ಉದಯಕಾಲದ ದಿನಗಳು ಅವು.. ಸದಸ್ಯತ್ವ ಕೋರಿ ಬಂದ ಹರಿಣಿ ಅಕ್ಕನ ಮನವಿಯನ್ನು ಅವರ ವ್ಯಕ್ತಿಪರಿಚಯ ನೋಡಿ ಅಂಕಿತ ಹಾಕಿದ್ದೆ. ಒಂದು ದಿನ ಚಾಟಲ್ಲಿ “ಧನ್ಯವಾದಾನಪ್ಪಾ” ಎಂದಿದ್ದರು. “ನಿಮ್ಮ ಕನ್ನಡಪರ ಕಾಳಜಿ ಕಂಡು ಖುಶಿಯಾಯಿತು” ಎಂದರು. “ಎಲ್ಲಿರುವುದು? ಕೆಲಸವೇನು?” ಎಂದೆಲ್ಲಾ ವಿಚಾರಿಸಿ ..”ನನಗೂ ಆ ಮರಳುಗಾಡಿನ ಪರಿಚಯವಿದೆ, ನಾವು ಇರಾಕ್ ನಲ್ಲಿ ಕೆಲ ವರ್ಷ ಇದ್ದೆವು ಎಂದಿದ್ದರು.
ಪದಾರ್ಥ ಚಿಂತಾಮಣಿಯ ಮೂಲಕ ಆತ್ಮೀಯರಾದ ಅಕ್ಕ ಒಮ್ಮೆ “ನನ್ನ ಕಾಜಾಣಕ್ಕೂ ಬಾಪ್ಪಾ, ಆಜಾದ್” ಎಂದಿದ್ದರು, ಲಿಂಕ್ ಕೊಡುತ್ತಾ. ಕಾಜಾಣ ತಾಣಕೆ ಹೋದಾಗಲೇ ಅಕ್ಕನ ಬಹುಮುಖ ಪ್ರತಿಭೆಯ ಅರಿವಾಗಿದ್ದು. ಅಕ್ಕ “ಕಾಜಾಣ” ತಾಣದ ಧ್ಯೇಯೋದ್ದೇಶಗಳನ್ನು ವಿವರಿಸಿದ ಪರಿಯೂ ನನಗೆ ಇಷ್ಟವಾಗಿತ್ತು.
"ಕಾಜಾಣ .. ಕಸ್ತೂರಿ ಕನ್ನಡದ ಕೋಗಿಲೆ !! .. ಇದು ನಮ್ಮ ಭಾರತ, ನಾಡು, ಇತಿಹಾಸ, ಭೌಗೋಳಿಕವಾಗಿ ಗಿರಿಶಿಖರಗಳು, ನದಿತೊರೆಗಳು, ಪ್ರವಾಸ, ಕಲಾವಿದರು, ಸಾಹಿತಿಗಳು, ಜಾನಪದ, ಕತೆ, ಕವನ, ಒಗಟುಗಳು, ಗಾದೆಗಳು, ಲಾವಣಿಗಳು, ನಳಪಾಕ, ಸಸ್ಯ ಸಂಪತ್ತು, ದೇವಾಲಯ, ಕೋಟೆ ಕೊತ್ತಲ, ಪೌರಾಣಿಕ ವಿಚಾರ, ಕನ್ನಡ ನುಡಿ, ಕಲೆ, ಸಂಪ್ರದಾಯ, ಸಂಸ್ಕೃತಿಯ ಪರಿಚಯಕ್ಕಾಗಿ ಮೈದಳೆದಿರುವ ವೇದಿಕೆ....ಎಂದಿದ್ದರು.

ಮಕ್ಕಳು ಮೊಮ್ಮಕ್ಕಳು ಟಿವಿ ಕಂಪ್ಯೂಟರ್ ಮುಂದೆ ಜಗದ ಪರಿವೆ ಇಲ್ಲದೇ ಕೂರೋದು ನೋಡಿ ಒಮ್ಮೆ ಹೇಳಿದ್ದು....
" ಬೆಳಿಗ್ಗೆ ಸಾಯಂಕಾಲ ಆ ಕಂಪ್ಯೂಟರ್ ಮುಂದೇನೇ ಕೂತಿರ‍್ತೀರಲ್ಲಾ ಕಣ್ಣು, ಬೆನ್ನು ಹಾಳಾಗಲ್ವಾ ? ಕಂಪ್ಯೂಟರು ಇಲ್ಲಾ..ಅಂದ್ರೆ... ಟಿವಿ....!! ಯಾರು ಕಂಡ್ ಹಿಡಿದ್ರೋ ? ಎದ್ದ್ ಆಟಕ್ ಹೋಗ್ಬಾರ‍್ದಾ ? "....
" ಎಷ್ಟ್ ಕರೆದ್ರೂ ಬರೋಲ್ಲಾ. ತಿಂಡೀ ತೀರ್ಥ, ಹಾಲೂ ಏನೂ ಬೇಡ್ವಾ ? ಹಾಳು ಕಂಪ್ಯೂಟರ್ ನ ಬಿಸಾಕ್ರೋ " ಈ ಡಯ್ಲಾಗ್ಸ್ ಎಲ್ಲಾ ಮೊಮ್ಮಕ್ಕಳಿಗೆ ...
" ಆಪೀಸು, ಆಪೀಸ್ ಬಿಟ್ರೆ ಸೆಲ್ಲು, ಇಲ್ಲಾ ಮೇಲ್ ಚೆಕ್ ಅಂತಾ ಕಂಪ್ಯೂತರ್ ಮುಂದೆ..  . ಅಮ್ಮನ ಹತ್ರ ಮಾತಾಡಕ್ಕೂ ಟಯ್ಮ್ ಇರಲ್ಲಾ, ಅಡಿಗೆ ಮನೇಲೂ ಒಬ್ಳೇ, ತಿನ್ನೋ ಟಯ್ಮ್ ನಲ್ಲೂ ಒಬ್ಳೇ ಬೇಜಾರಾಗಲ್ವಾ ? ಈ ಪುರುಷಾರ್ಥಕ್ಕೆ ಮನೆ ಯಾಕ್ಬೇಕು ? ವೃದ್ಧಾಶ್ರಮಾನೆ ನೋಡ್ಕೋಬಹುದು." - ಇದೆಲ್ಲಾ ಕೋಪ ಬಂದಾಗ ನಾನು , ಮಗನಿಗೆ ಬಿಟ್ಟ ಮಾತಿನ ವರಸೆ” ಎಂದಿದ್ದರು...
ಇದಕ್ಕೆ ಕಾರಣವೂ ಇಲ್ಲದಿಲ್ಲ. ಬಹುಶಃ ನನಗಿಂತಾ ಚನ್ನಾಗಿ ಅಕ್ಕ ಅಯ್ -ಪ್ಯಾಡನ್ನು ಬಳಸುವುದು ಕಲಿತಿದ್ದು ಪೇಸ್ಬುಕ್ ಗೀಳು ಹತ್ತಿದಮೇಲೆಯೇ ಅನ್ನಿಸುತ್ತೆ. ಪದಾರ್ಥ ಚಿಂತಾಮಣಿಯ ಸಮೂಹ ನಿರ್ವಾಹಕ ಮಂಡಳಿಗೆ ಬಂದಮೇಲಂತೂ ಅದು ಹೆಚ್ಚೇ ಆಯಿತು ಎನ್ನಬೇಕು. ಚಾಟ್ ಗೆ ಬಂದಾಗ..
“ಆಜಾದ್, ಇದ್ದೀರಾ...? ಪದಾರ್ಥ ಚಿಂತಾಮಣಿಯಲ್ಲಿ ಒಬ್ಬರು ತುಂಬಾ ಇಂಗ್ಲೀಷ್ ಬಳಸ್ತಿದ್ದಾರೆ, ಯಾಕೆ ನೀವು ಯಾರೂ ಏನೂ ಹೇಳ್ತಿಲ್ಲ? ಶಿಸ್ತು ಇಲ್ಲ ಅಂದ್ರೆ ಕುರಿ ಮಂದೆ ಆಗುತ್ತೆ, ಒಬ್ಬರನ್ನ ನೋಡಿ ಮತ್ತೊಬ್ಬರು ಕನ್ನಡ ಬಿಟ್ಟು ಇಂಗ್ಲೀಷು ಇಲ್ಲ ಕಂಗ್ಲೀಷು ಹಾಕ್ತಾರೆ... ಆಮೇಲೆ ನಿಮ್ಮ ಸಮೂಹವನ್ನ ನಿಯಂತ್ರಿಸುವುದು ಕಷ್ಟ ಆಗುತ್ತೆ. ಎಲ್ಲಾ ನಿರ್ವಾಹಕರಿಗೂ ಒಮ್ಮೆ ಹೇಳಿಬಿಡಿ..”
ಹೀಗೆ ಒಂದು ಸಮೂಹದಲ್ಲಿ ಶಿಸ್ತು ಹೇಗಿರಬೇಕು ಎಂದು ಆ ದಿನ ಚಾಟಲ್ಲೇ ಕ್ಲಾಸ್ ತಗೊಂಡಿದ್ದಾರೆ. ಅಷ್ಟೇಕೆ..ಒಂದು ದಿನ ಯಾವುದೋ ಅಂಚೆಯೊಂದಕ್ಕೆ ಕಾಜಾಣ ತಾಣದಲ್ಲಿ ನಾನು ಪ್ರತಿಕ್ರಿಯೆ ಹಾಕಿದ್ದೆ... ಮರು ಕ್ಷಣವೇ ಅಕ್ಕ ಚಾಟಲ್ಲಿ ಹಾಜರ್...!!!
ಆಜಾದ್, ನೀವೇ ಇಂಗ್ಲೀಷ್ ಬಳಸಿದ್ರೆ ಹೇಗೆ...? ನೋಡಿ ಒಮ್ಮೆ ಕಾಜಾಣದಲ್ಲಿ ನಿಮ್ಮ ಪ್ರತಿಕ್ರಿಯೆ...!! ಅಂತ ಮೆದುವಾಗಿ ಗದರಿದ್ದಕ್ಕೆ... ಆ ಪ್ರತಿಕ್ರಿಯೆಯನ್ನು ಮರುಮಾತಿಲ್ಲದೇ ಬದಲಾಯಿಸಿ ಕನ್ನಡದಲ್ಲಿ ಟಂಕಿಸಿದ್ದೆ. ಶಿಸ್ತು ಎಂದರೆ ಒಲವು ಜಾಸ್ತಿ. ಕಮ್ಮಟ ಸಿದ್ದತೆಗಾಗಿ ನಾವು ಮಾಡಿಕೊಂಡಿದ್ದ ಚರ್ಚಾ ಚಾವಡಿಯಲ್ಲಿ ನಡೆಯುವ ಸಂಬಾಷಣೆಯಲ್ಲಿ ಹಾಸ್ಯ ಹೆಚ್ಚಾದಾಗ, ಪರೋಕ್ಷವಾಗಿ ಎಚ್ಚರಿಸುತ್ತಿದ್ದುದು ಹೀಗೆ. “ಮುಖ್ಯ ಚರ್ಚೆ ಮುಗಿದಿದ್ರೆ ನಾನು ಹೊರಡ್ತೀನಪ್ಪಾ, ನಿಮ್ಮ ಹಾಸ್ಯಚಾವಡಿ ಮುಂದುವರೆಸಿ”.
ಆಗ ನಾವು ಎಚ್ಚೆತ್ತುಕೊಂಡು ಮುಖ್ಯ ವಿಷಯವನ್ನು ಚರ್ಚೆಗೆ ತರುತ್ತಿದ್ದೆವು.
ಕಳೆದ ವರ್ಷ ಪಚಿಂಪದಕಮ್ಮಟ-೨೦೧೫ ರ ಮೂಲ ಬುನಾದಿ ಹಾಕಿದ್ದು ಅಕ್ಕನ ಮನೆಯಲ್ಲಿ ಅಕ್ಕನ ಆತಿಥ್ಯದಲ್ಲೇ. ಯುವಕರೂ ನಾಚಿಕೊಳ್ಳಬೇಕಾದ ಹುರುಪು ಉತ್ಸಾಹ ಅಕ್ಕನಲ್ಲಿತ್ತು. ಈ ವರ್ಷದ ಕಮ್ಮಟಕ್ಕೆ ಎಲ್ಲ ವಿಧವಾಗಿ ಸಹಕರಿಸುತ್ತೇನೆ.. ಆದರೆ ನನ್ನ ಮನೆ ದೂರ, ಇಲ್ಲವಾಗಿದ್ದರೆ ಸಂಚಿಕೆಯ ಪ್ರಮುಖ ಕಾರ‍್ಯ ಮಾಡುತ್ತಿದೆ, ಮಂಜಣ್ಣನಿಗೆ ಸಹಾಯವಾಗ್ತಿತ್ತು ಎಂದಿದ್ದರು. ಅವರಿಗೆ ಮಂಜುನಾಥ್ ರ ಅಪಾರ ಕನ್ನಡ ಜ್ಞಾನದ ಬಗ್ಗೆ ಅಭಿಮಾನವಿತ್ತು... ಒಮ್ಮೆ ಹೀಗೆ ನನ್ನೊಡನೆ ಚಾಟಲ್ಲಿ ಹೇಳಿದ್ದು:-
ಸಾಹಿತ್ಯ ಹೊತ್ಕೊಂಡು ,
ಸಾಂಗತ್ಯ ಕಟ್ಕೊಂಡು ,
ಅಪ್ಪ ಕೊಟ್ವಿದ್ಯೇ ಹೊಡಕೊಂಡು
ಅಪ್ಪ ಕೊಟ್ವಿದ್ಯೇ ಹೊಡಕೊಂಡು
ಮಂಜಣ್ಣ ಫೇಸ್ಬುಕ್ನಲ್ ವಿಷಯ ಬರೆದಾನೇ ||
ನಾನು ಕೇಳಿದ್ದೆ,
“ಅಕ್ಕ,... ಅಪ್ಪ ಕೊಟ್ಟೆಮ್ಮೆ, - ಜಾಗಕ್ಕೆ ಅಪ್ಪ ಕೊಟ್ವಿದ್ಯೀ ಅಂತ ಯಾಕೆ ಬಳಸಿದ್ರಿ ಅಂದಿದ್ದಕ್ಕೆ... “ಈಗ ಕನ್ನಡದ ಸ್ಥಿತಿ ಹಾಗೇ ಆಗಿದೆ” ಎಂದಿದ್ದರು.
ತನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಸಾಧನೆಯ ಬಗ್ಗೆ ಅಪಾರ ಹೆಮ್ಮೆ ಅಕ್ಕನಿಗೆ. ಇಂದಿರಾ, ಪ್ರಸಾದ್, ವಿಷ್ಣು, ಪಾರ್ಥ ಇವರ ಬಗ್ಗೆ ಎಲ್ಲಾ ತುಂಬಾ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ನಾನೊಮ್ಮೆ ಮದರಾಸಿಗೆ ಹೋಗಬೇಕಾಗಿ ಬಂದಾಗ ಮಗಳಿಗೆ ಪೋನ್ ಮಾಡಿ ನಾನು ಹೋಗುವ ವಿಷಯ ತಿಳಿಸಿದ್ದರು. ಅಲ್ಲಿರುವಾಗ ಎರಡು ಮೂರು ಸಲ ನೆನಪಿಸಿದ್ದರು. ಹೇಗೋ ಸಮಯ ಮಾಡಿಕೊಂಡು ಹೋಗಿ ಬಂದದ್ದು ಹೇಳಿದೆ.
“ಅಲ್ಲ... ಏನೂ ತಿನ್ನದೇ, ಕುಡಿಯದೇ.. ಹೊರಟು ಬಿಟ್ರಂತಲ್ಲ ಆಜಾದ್”.. ಎಂದದ್ದೂ ಹೌದು.
೨೦೧೬ ರ ಪದ ಕಮ್ಮಟ ತಯಾರಿ ಸಮಯದಲ್ಲಿ ಅನಾರೋಗ್ಯ ಮತ್ತು ಮನೆ ದೂರವಿದ್ದುದರಿಂದ ಸರಿಯಾಗಿ ನಿಮಗೆಲ್ಲಾ ನನ್ನಿಂದ ಸಹಾಯ ಆಗ್ತಿಲ್ಲ‌ಎಂದು ಮರುಗಿದ್ದರು. ಅವರು ದೈವಾಧೀನರಾಗುವ ಎರಡೇ ತಾಸಿಗೆ ಮುನ್ನ ಚನ್ನೈ ನಿಂದ ಮೆಸೇಜ್ ಸಹಾ ಮಾಡಿದ್ದರು..
“ನಾನು ೫ ನೇ ತಾರೀಕಿನೊಳಗೆ ಬೆಂಗಳೂರಿಗೆ ಬರುತ್ತೇನೆ, ಸಹಾಯಕ್ಕೆ ಕರೆಯುವುದನ್ನು ಮರೆಯಬೇಡಿ”.. ಎಂದು ಹುಮ್ಮಸ್ಸಿನಿಂದ ಹೇಳಿದ್ದರು. ತಮ್ಮ ಮಾತನ್ನಂತೂ ಉಳಿಸಿಕೊಂಡರು..
ಆದರೆ ಅವರು ಬೆಂಗಳೂರು ತಲುಪಿದ ಪರಿಯೇ ಬೇರೆಯಾಗಿತ್ತು...!!
ಕ್ರೂರ ರಾತ್ರಿ ದೈವ ಅವರನ್ನು ಕರೆಸಿಕೊಂಡಿತ್ತು.
ಪೇಸ್ಬುಕ್ ನ ಒಂದು ಆಪ್ಸ್ ನಲ್ಲಿ  ನಿಮ್ಮ ಸಹಪಾಠಿಗಳು ಅಂತ ಒಂದು ಆಪ್ ಬಂದಿತ್ತು ಒಮ್ಮೆ.
ಅದನ್ನು ಉಪಯೋಗಿಸಿ, ಅದರ ಫಲಿತಾಂಶದ ಅಂಚೆಯನ್ನು ಹಾಕಿದ್ದೆ. ಅದಕ್ಕೆ ಅಕ್ಕ...
“ಆಜಾದ್, ಅಮ್ಮ ಮಗ ಹೇಗೆ ಕ್ಲಾಸ್ ಮೇಟ್ಸ್ ಆಗ್ತಾರೆ ?” ಎಂದು ಪ್ರಶ್ನಿಸಿದಾಗ ನಿಜಕ್ಕೂ ಆ ಹಿರಿಜೀವದ ಮನದಲ್ಲಿ ನಾನು ಮಗನಾಗಿಯೇ ನೆಲೆಯೂರಿದ್ದೇನೆ ಎನಿಸಿತ್ತು.
ಜಾತಿ, ಮತ ಧರ್ಮಗಳ ಅಸಹ್ಯ ರೂಪಕ್ಕೆ ಸೊಪ್ಪು ಹಾಕದ ಅಕ್ಕ ನನ್ನಲ್ಲಿ ಮಗನನ್ನು ಕಂಡದ್ದು ಆಶ್ಚರ್ಯವಲ್ಲ. ಅವರ ಬಹು ಅಕಾಂಕ್ಷೆಯ ಪ್ರವಾಸ ಕಥನ ಮುಂದಾದ ಲೇಖನಗಳ ಪುಸ್ತಕ ಹೊರಬಂದರೆ ನಿಜಕ್ಕೂ ಆ ಹಿರಿಯ ಉದಾತ್ತ ಮನೋಭಾವದ ಆತ್ಮಕ್ಕೆ ಸಂತಸವನ್ನುಂಟುಮಾಡುವುದಂತೂ ದಿಟ.
ದೇವರು ಅಕ್ಕನ ಆತ್ಮಕ್ಕೆ ಚಿರ ಶಾಂತಿ ನೀಡಲಿ, ನಮ್ಮನ್ನೆಲ್ಲಾ ಮೇಲಿಂದ ಹರಸಲಿ ಎನ್ನುತ್ತಾ..ಮತ್ತೊಮ್ಮೆ ಆ ಉತ್ತಮಾತ್ಮಕ್ಕೆ ನಮಿಸುವೆ.