Tuesday, February 23, 2016

ಪುಸ್ತಕಗಳು

(ಚಿತ್ರ: ಅಂಕೆಘಟ್ಟದ -ಅಂಕೆಗೌಡರ "ಪುಸ್ತಕಮನೆ")

ಪುಸ್ತಕಗಳು
*********
(ಹೆಸರಾಂತ ಹಿಂದಿ ಕವಿ – ಶ್ರೀ ಗುಲ್ಜಾರ್ ರವರ “ಕಿತಾಬೇಂ” ಕವನದ ಭಾವಾನುವಾದ)

ಪುಸ್ತಕಗಳು ಇಣುಕುತಿವೆ
ಮುಚ್ಚಿದ ಕಪಾಟುಗಳ ಗಾಜುಗಳ ಮೂಲಕ
ಬಲು ಆಸೆಯಿಂದ ದಿಟ್ಟಿಸುತಿವೆ.
ಮಾಸಗಳುರುಳಿದರೂ ಮಿಲನದೂರ-
ಅವುಗಳ ಸಂಗದಲಿ ಕಳೆದ ಆ ಸಂಜೆಗಳು,
ಈಗ ಹಾಗೇ ಕಳೆದುಹೋಗುತಿವೆ
ಕಂಪ್ಯೂಟರಿನ ಪರದೆಯ ಮೇಲೆ
ಬಲು ಚಡಪಡಿಸುತಿವೆ ಪುಸ್ತಕಗಳು, ಇವಕೆ
ಈಗ ನಿದ್ದೆಯಲಿ ನಡೆಯುವ ಅಭ್ಯಾಸವಾಗಿಬಿಟ್ಟಿದೆ.

ಪುಸ್ತಕಗಳು
ಶಕ್ತಿಗುಂದುವುದಿಲ್ಲವೆನುತ ತಾ
ಸಾರಿದ ಮೌಲ್ಯಗಳು – ಮೌಲ್ಯಗಳಾಗಿ
ಉಳಿದಿಲ್ಲ ಈಗ ಮನೆಗಳಲಿ
ಕಳಚಿಕೊಂಡಿವೆ ಇಂದು ತಾ ಸಾರಿದ ಸಂಬಂಧಗಳು,
ನಿಟ್ಟುಸಿರೊಂದು ಬಿಡಿಸಿಕೊಂಡಿತು ನಾ
ಪುಟವೊಂದು ಮಗುಚಲು, ಅಲ್ಲಿ
ಕೆಳಗುರುಳಿವೆ ಹಲ ಪದ ಅರ್ಥಗಳು,
ಮರದ ತುಂಡಿನಂತೆ ಇಲ್ಲದಂತೆ ಎಲೆಗಳು,
ಇನ್ನು ಅರ್ಥ ಬೆಳೆಯದಂತೆ,
ಹಲ ಪರಂಪರೆಗಳು ಹರಡಿದಂತೆ,
ಮಣ್ಣಿನ ಕುಡಿಕೆಗಳ ಮುರಿದ ತುಂಡುಗಳಂತೆ,
ಹಳತಾದ ನನ್ನ ಗಾಜಿನ ಲೋಟದಂತೆ.

ಪುಸ್ತಕಗಳ
ಪ್ರತಿ ಪುಟದ ತಿರುವು
ತರುತ್ತಿರಲಿಲ್ಲವೇ ಒಂದು ಘಮ ನಾಲಗೆಗೆ?
ಈಗ ಬೆರಳ “ಕ್ಲಿಕ್ಕಿ”ಸುವಿಕೆ..
ಪರದೆಗೆ ತರುವುದು ಚಿತ್ರಪ್ರವಾಹ
ಹರಡಿ ಪರದೆಯಮೇಲೆ ಪದರ ಪದರ, ಈಗ...
ಕಡಿದುಬಿದ್ದಿದೆ ಪುಸ್ತಕಗಳೊಂದಿಗೆ ಒಮ್ಮೆ ಇದ್ದ ಬಂಧ,
ಎದೆ ಮೇಲೆ ಮಗುಚಿಟ್ಟು ಪುಸ್ತಕವ ಮಲಗುತ್ತಿದ್ದ ಚಂದ,
ಅಥವಾ, ಹಾಗೇ ಮಡಿಲಲ್ಲಿಟ್ಟು,
ಇಲ್ಲವೇ ಮಂಡಿಮೇಲೆ ಕಸರತ್ತು,
ತಲೆತಗ್ಗಿಸಿ ಪ್ರಾರ್ಥಿಸುವಂತಿತ್ತು.
ದಿಟವೇ, ಜ್ಞಾನ ಜಗತ್ತು ಈಗಲೂ ಜೀವಿತವೇ.
ಆದರೆ, ಪುಟಗಳಲಿ ಅಡಗಿಸಿಟ್ಟ
ಚಪ್ಪಟೆಯಾದ ಆ ಹೂಗಳನು,
ಆ ಸುಂದರ ನವಿಲುಗರಿಗಳನು,
ಆ ಕೊಡುವ, ತೆಗೆದುಕೊಳ್ಳುವ,
ಬೀಳಿಸುವ, ಎತ್ತಿಕೊಳ್ಳುವ
ಪ್ರೀತಿಯ ನೆಪಗಳನು
ಮರೆಯುವುದೆಂತು?
ಬಹುಶಃ, ಮರೆಯುವುದಿಂತು.