Monday, April 13, 2009

ಸಾಗರಗಳು----ಮುಂದುವರೆದು,...
ನಾವು ಸಮುದ್ರ ತೀರದ beach ವಾತಾವರಣವನ್ನು ಗೆಳೆಯರೊಂದಿಗೆ, ಪರಿವಾರದೊಂದಿಗೆ ಹೋಗಿ ಅಸ್ವಾದಿಸುತ್ತಾ ವಿಹರಿಸುತ್ತೇವೆ. ಮಂಗಳೂರಿನ ಉಳ್ಳಾಲ,ಸೋಮೇಶ್ವರ ಅಥವಾ ಪಣಂಬೂರಿನ ಸಮುದ್ರ ತೀರಗಳನ್ನು ನೋಡಲು ಭಾನುವಾರ ನಾವು ಹಾಸ್ಟೆಲ್ ನಿಂದ ಮಧ್ಯಾನ್ಹದ ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆದು ಹೊರಟುಬಿಡುತ್ತಿದ್ದೆವು. ದಿನವಿಡೀ ಬಿಸಿಲಿನಲ್ಲಿ ದಣಿದು ಸ್ವತಃ ಸೂರ್ಯನೇ ಸಮುದ್ರದಲ್ಲಿ ಮುಳುಗಲು ಹೋಗುತ್ತಿದಾನೋ ಎನ್ನಿಸುವಂತೆ ಪಶ್ಚಿಮದ ದಿಗಂತ ಕೆಂಪಾಗಿ ನಂತರ ಕೇಸರಿಯಾಗಿ ನಂತರ ಕ್ರಮೇಣ ಸೂರ್ಯ ಸಮುದ್ರದೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡನೋ ಎನ್ನುವಂತೆ ಭಾಸವಗುತ್ತಿತ್ತು. ತೀರವನ್ನು ಸಮೀಪಿಸುತ್ತಿದ್ದಂತೆ ಸಮುದ್ರದ ಅಲೆಗಳು ಎತ್ತರಕ್ಕೆ ಬೆಳೆಯುತ್ತಾ ಎಲ್ಲಿ ಮರಳಿನ ಮೇಲೆ ಕುಳಿತ ನಮ್ಮ ಮೇಲೆ ಅಪ್ಪಳಿಸುತ್ತವೆಯೋ ಎನ್ನುವಂತೆ ಹತ್ತಿರವಾಗುತ್ತಾ..ಎತ್ತರ ಹೆಚ್ಚಾಗಿ ಶಿಖರ ಮುರಿದಂತೆ ಮೇಲ್ಪದರ ಮುರಿದು ತನ್ನದೇ ಪಾದಕ್ಕೆ ಬೀಳುತ್ತಾ ಉರುಳಿಬಿಡುತ್ತಾ ನಮ್ಮ ಹೆದರಿಸಿದಂತೆ ಮಾಡಿ ಕರಗಿಬಿಡುತ್ತಿದ್ದವು.

ಸಮುದ್ರದ ಅಲೆಗಳು ಹೇಗೆ ಉತ್ಭವಿಸುತ್ತವೆ?
ಸಮುದ್ರ ತೀರದಲ್ಲಿ ಕುಳಿತು ಮೇಲೆ ಹೇಳಿದಂತೆ ಅನುಭವಿಸಿದ ಬಹುಶಃ ಎಲ್ಲರ
ಮನಸ್ಸಲೂ ಮೂಡುವ ಪ್ರಶ್ನೆಯಿದು. ಗಾಳಿಯಿಂದ ಅಲೆಗಳು ಹುಟ್ಟುತ್ತವೆ ಎಂದು ಹೇಳುವವರೂ ಸ್ವಲ್ಪಮಟ್ಟಿಗೆ ಸರಿಯೇ, ಆದರೆ ಇದು ಸಣ್ಣಪುಟ್ಟ ಕುಂಟೆ, ಕೆರೆ ಬಾವಿ ಗೆ ಬಹುಶಃ ಹೆಚ್ಚು ಸೂಕ್ತ. ಸಮುದ್ರದಷ್ಟು ಅಗಾಧ ಜಲರಾಶಿಯನ್ನು ಬರಿಯ ಗಾಳಿ ಅಲುಗಾಡಿಸುವುದೆಂದರೆ ಅಷ್ಟು ನಿಜವಲ್ಲ. ಭೂಮಿಯ ಚಲನೆ, ಚಂದ್ರನ ಗುರುತ್ವಾಕರ್ಷಣೆ ಹಾಗೂ ಸಮುದ್ರ ತಲದ ರೂಪರೇಶೆಗಳು ಗಾಳಿಯ ಪ್ರಭಾವವನ್ನು ಹೆಚ್ಚಿಸುತ್ತವೆ. ಗಾಳಿಯ ಒತ್ತಡ ಅಥವಾ ವಾಯುಭಾರದ ಕುಸಿತ ಸಮುದ್ರದ ಅಲೆಗಳ ಮೇಲೆ ಹೆಚ್ಚು ಪರಿಣಾಮವನ್ನುಂಟುಮಾಡುತ್ತದೆ. ಚಂಡಮಾರುತದ ಮುಖ್ಯ ಕಾರಣ ಇದೇ ಆಗಿದೆ. ಇನ್ನು ಸುನಾಮಿ ಎನ್ನುವುದು ವಾಯುಭಾರ ಕುಸಿತದೊಂದಿಗೆ ಭೂಕಂಪನದ ವಿಕೋಪಸೇರಿ ನೈಸರ್ಗಿಕ ಮಹಾವಿಕೋಪವಾಗುತ್ತದೆಂದು ನಮಗೆಲ್ಲಾ ಈ ಗಾಗಲೇ ತಿಳಿದಿದೆ.



ಸಾಮಾನ್ಯ ಪರಿಸ್ಥಿತಿಗಳಲ್ಲಿ ಸಮುದ್ರ ಅಲೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸಲು ಇಛ್ಚಿಸುತ್ತೇನೆ.
ಸಮುದ್ರದ ತೀರದಿಂದ ದೂರಕ್ಕೆ ಹೋದಂತೆ ಆಳ ಹೆಚ್ಚುತ್ತದೆ ಎಂದು ನಿಮಗೆ ತಿಳಿದೇ ಇದೆ. ಇದು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ತೀರದಿಂದ ಸುಮಾರು ದೂರದವರೆಗೂ ಆಳ ಕಡಿಮೆಯಿರುತ್ತದೆ (ಭೂಮಂಡಲದ ರಚನೆಯ ಆಧಾರದ ಮೇಲೆ ಇದರಲ್ಲಿ ವ್ಯತ್ಯಾಸಗಳಿರಬಹುದು). ಈ ಇಳಿಜಾರಿನ ಪ್ರದೇಶವನ್ನು continetal shelf (ಭೂಖಂಡ ಇಳಿಜಾರು) ಎನ್ನಲಾಗುತ್ತದೆ (ಚಿತ್ರ ನೋಡಿ). ಆನಂತರ ಇಳಿಜಾರು ಸ್ವಲ್ಪ ಕಡಿದಾಗಿತ್ತದೆ, ಈ ಭಾಗವನ್ನು contonental slope (ಭೂಖಂಡ ಕಡಿದು ಇಳಿಜಾರು) ಮತ್ತು ಆಳ ಭಾಗವನ್ನು deep sea (ಆಳ ಸಮುದ್ರ) ಎನ್ನಲಾಗುತ್ತದೆ. ಆಳವುಳ್ಳ ಸಮುದ್ರದ ಮೇಲ್ಭಾಗದಲ್ಲಿ ನೀರಿನ ಸಾಂದ್ರತೆ (ತೂಕ), ಭೂಮಿಯ ಚಲನ ಮತ್ತು ಗುರುತ್ವಗಳಿಂದ ಇಡೀ ಜಲಪದರ ಮೇಲೆ-ಕೆಳಗೆ ಆಡುತ್ತಿರುತ್ತದೆ. ಇದನ್ನು ಉಬ್ಬರಗಳು ಅಥವಾ ಸ್ವೆಲ್ಸ್ (swells) ಎನ್ನುತ್ತಾರೆ. ಈ ಉಬ್ಬರಗಳು ಮೇಲೆ ಕೆಳಗೆ ಆಡುವುದರಿಂದ ಆಳ ಸಮುದ್ರದ
ಪ್ರದೇಶದಲ್ಲಿ ಅಷ್ಟಾಗಿ ಮನವರಿಕೆಯಾಗದಷ್ಟು ಅಲೆಗಳು ಇರುತ್ತವೆ ಎನ್ನಬಹುದು. ಈ ಉಬ್ಬರಗಳು ಭೂಖಂಡದ ಇಳಿಜಾರನ್ನು ತಲುಪಿದಾಗ ಭೂಭಾಗ ನೀರಿನ ಪದರವನ್ನು ಪುಟಿಸುತ್ತದೆ. ಆಗ ಉಬ್ಬರದ ಅಬ್ಬರ ಸ್ವಲ್ಪ ಹೆಚ್ಚಾಗುತ್ತದೆ. ಭೂಭಾಗದ ಇಳಿಜಾರು ತೀರಕ್ಕೆ ಹತ್ತಿರವಾಗುತ್ತಾ ಉಬ್ಬರದ ಅಬ್ಬರ ಹೆಚ್ಚಾಗುತ್ತಾ ಅಲೆಯ ರೂಪ ಪಡೆಯುತ್ತದೆ. ಹೀಗೆ ಏರುವ ಅಲೆ ತೀರವನ್ನು ಸಮೀಪಿಸಿದಂತೆ ಎತ್ತರ ಹೆಚ್ಚಾಗಿ ತೀರದ ಭೂಮಿಯ ತಡೆಯೂ ಹೆಚ್ಚಾಗಿ ಒಂದು ಹಂತದ ಎತ್ತರಕ್ಕೆ ಹೋದ ಅಲೆಯ ಮೇಲ್ಭಾಗ ಮುರಿದು ಬೀಳುತ್ತದೆ ಆಗ ಅಲೆ ನಿಧಾನವಾಗಿ ತೀರದಲ್ಲಿ ವರ್ತುಲ ಪೂರೈಸಿ ಮತ್ತೆ ಸಮುದ್ರದತ್ತ ನಡೆಯುತ್ತದೆ. ಚಂಡಮಾರುತ ಅಥವಾ ಸುನಾಮಿ ಮುಂತಾದ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮೇಲೇರುವ ನೀರಿನ ಪ್ರಮಾಣ ಅಧಿಕವಾಗುವುದರಿಂದ ಅದು ತನ್ನ ಸಹಜ ತೀರ ಪ್ರದೇಶವನ್ನು ಮೀರಿ ಮುನ್ನಡೆಯುತ್ತದೆ.

Saturday, April 11, 2009

ಗೆಳೆಯರೇ ಸಮುದ್ರಗಳ ಬಗ್ಗೆ ಮಾಹಿತಿ ಕೊಡಬೇಕೆಂಬ ಯೋಚನೆಯಿಂದ ಈ ಶೃಂಖಲೆಯನ್ನು ಪ್ರಾರಂಭಿಸುತ್ತಿದ್ದೇನೆ. ಮೊದಲ ಕಂತಿನಲ್ಲಿ ಸಮುದ್ರಗಳ ಬಗ್ಗೆ ಕ್ಲುಪ್ತ ಮಾಹಿತಿ ಮತ್ತು ಕ್ರಮೇಣ ವಿವರಗಳನ್ನು ನೀಡಬೇಕೆಂಬುದೇ ನನ್ನ ಆಶಯ.








ನಮ್ಮ ಸಾಗರ-ಸಮುದ್ರ ಸಂಪತ್ತು -1

ಭೂಮಂಡಲದ ಶೇ ೭೦ ಭಾಗ ಸಮುದ್ರಗಳಿಂದ ಕೂಡಿದೆ. ಈ ಅಗಾಧ ಜಲರಾಶಿಯೇ ಸಕಲ ಜೀವೋದ್ಭವಕ್ಕೆ ದಾರಿಯಾಯಿತೆಂದರೆ ಜಲ ಮತ್ತು ಜೀವಗಳ ಮಧ್ಯೆ ಇರುವ ಅಪೂರ್ವ ಸಂಬಂಧ ಎಷ್ಟೊಂದು ಗಾಢವಾದುದು ಎಂದು ತಿಳಿಯುತ್ತದೆ. ಎಲ್ಲ ಸಮುದ್ರಗಳೂ ಉಪ್ಪುನೀರಿನಿಂದ ಕೂಡಿದ್ದು, ಭೂಭಾಗದ ಲವಣಾಂಶಗಳ ಕರಗುವಿಕೆಯಿಂದ ನದಿಗಳಿಂದ ಹರಿದುಬಂದು ಸಮುದ್ರ ಸೇರಿದ ನದಿನೀರು ಉಪ್ಪಾಗಲು ಕಾರಣವಾಗುತ್ತದೆ. ಸಮುದ್ರದ ನೀರಿನಲ್ಲಿ ಸರಾಸರಿ ೩.೫ ರಿಂದ ೪.೦ ಶೇ. ಉಪ್ಪಿನಂಶ ಇರುತ್ತದೆ. ಕೆಲ ಸಮುದ್ರಗಳಲ್ಲಿ (ನದಿಗಳ ಅಗಾಧತೆ, ಮಂಜುಕರಗುವಿಕೆ ಮತ್ತು ಅಧಿಕ ಮಳೆ ಈ ಎಲ್ಲಾ ಕಾರಣಗಳಿಂದ) ಉಪ್ಪಿನಂಶ ಕಡಿಮೆಯಿರುತ್ತದೆ. ‘ಮೃತ‘ ಅಥವಾ ‘ಸತ್ತ ಸಮುದ್ರ‘ (Dead Sea) ಎಂದೇ ಹೆಸರಾಗಿರುವ ಸಮುದ್ರದ ಉಪ್ಪಿನಂಶ ಅತ್ಯಧಿಕವಾಗಿದ್ದು ಇಲ್ಲಿ ಜೀವರಾಶಿ ಬಹಳ ವಿರಳ. ಈ ಸಮುದ್ರದ ನೀರಿನಲ್ಲಿರುವ ಉಪ್ಪಿನಂಶ ಎಷ್ಟಿರಬಹುದೆಂದು ಯೋಚಿಸಿ..!! ಪ್ರತಿ ಲೀಟರ್ ನೀರಿನಿಂದ ೩೩೦ ಗ್ರಾಂ ಉಪ್ಪನ್ನು ಪಡೆಯಬಹುದೆಂದರೆ...ಅಲ್ಲಿ ಯಾವ ಜೀವ ಉಳಿಯಲು ಸಾಧ್ಯ ಯೋಚಿಸಿ..??.!!! ಈ ಸಮುದ್ರ ಸಮುದ್ರ ಮಟ್ಟದಿಂದ ಸುಮಾರು ೪೨೦ ಮೀಟರ್ ಕೆಳಗಡೆ ಇದ್ದು, ವಾರ್ಷಿಕ ಮಳೆಪ್ರಮಾಣ ೫೦ (ದಕ್ಷಿಣ ಭಾಗ) ರಿಂದ ೧೦೦ ಮಿ.ಮೀ. ಆಗಿರುತ್ತದೆಂದು ದಾಖಲೆ ಹೇಳುತ್ತದೆ








ಸಾಗರಗಳನ್ನು ಮುಖ್ಯವಾಗಿ ಶಾಂತ (Pacific) ಸಾಗರ, ಅಟ್ಲಾಂಟಿಕ್ (Atlantic) ಸಾಗರ, ಹಿಂದೂ ಮಹಾ ಸಾಗರ, ಧೃವ ಸಾಗರ (ಉತ್ತರ ಮತ್ತು ದಕ್ಷಿಣ ಧೃವ) ಗಳೆಂದು ಹೆಸರಿಸಲಾಗಿದೆ. ಭೂಭಾಗದ ಮೂರನೇ ಒಂದು ಭಾಗ ಆವರಿಸಿರುವ ಶಾಂತ ಸಾಗರ ಅತ್ಯಂತ ವಿಶಾಲ ಸಾಗರ. ಭೂ ಮಂಡಲದ ಅತ್ಯಂತ ಆಳದ ಕಂದರ ಈ ಸಾಗರದಲ್ಲೇ ಕಂಡುಬರುತ್ತದೆ. ಇದನ್ನು Challenger's Deep (ಛಾಲೇಂಜರ್ ಕಂದರ) ಅಥವಾ Mariana Trench (ಮೆರಿಯಾನಾ ಕಂದರ) ಎನ್ನುತ್ತಾರೆ. ಈ ಕಂದರದ ಆಳ ಎಷ್ಟೆಂದರೆ...ಅತಿ ಎತ್ತರದ ಶಿಖರವಾದ ಎವೆರೆಸ್ಟನ್ನು ಸುಲಭವಾಗಿ ಸಮುದ್ರದಲ್ಲಿ ಮುಳುಗಿಸಬಹುದು...!!!! ಅಂದರೆ ಈ ಆಳ ಸುಮಾರು ೧೦ ೯೧೧ ಮೀಟರ್ ಅಥವಾ ೩೫,೭೯೭ ಅಡಿ ಎಂದು ಅಂದಾಜಿಸಲಾಗಿದೆ (ಇದರ ನಿಖರ ಆಳ ತಿಳಿಯಲಾಗಿಲ್ಲ..!!! ಇದು ಇನ್ನೂ ಆಳವಿರಬಹುದು..!!!)








ಇನ್ನು ಸಮುದ್ರದಲ್ಲಿ ಪರ್ವತಗಳಿವೆಯೇ..?? ಹೌದು..!! ಕೆಲವಂತೂ ಸಮುದ್ರ ತಳದಿಂದ ಮೇಲೆದ್ದು ಸಮುದ್ರಮಟ್ಟವನ್ನೂ ಮೀರಿ ಸಮುದ್ರದಮೇಲೆ ಕಂಡುಬಂದಿವೆ. ಭೂಭಾಗದ ಅತ್ಯಂತ ಎತ್ತರದ ಪ್ರದೇಶ ಹಿಮಾಲಯ ಪರ್ವತಗಳು ಎಂದೂ, ಎವರೆಸ್ಟ್ ಪರ್ವತ ವಿಶ್ವದ ಅತ್ಯುನ್ನತ ಪರ್ವತವೆಂದೂ ಬಹುಶಃ ಪ್ರಾಥಮಿಕ ಪಠ್ಯ ಪುಸ್ತಕಗಳ ಮೂಲಕ ತಿಳಿಸಲಾಗಿದೆ. ಇಲ್ಲಿ ಕುತೂಹಲಕರ ಅಂಶವೊಂದನ್ನು ತಿಳಿಸಲಿಚ್ಛಿಸುತ್ತೇನೆ.!! ಏನು ಗೊತ್ತೇ..?? ಅತ್ಯಂತ ಎತ್ತರದ ಪರ್ವತ ಎವರೆಸ್ಟ ಅಲ್ಲ ಎಂದು....!!!! ಹೌದು...ಸಮುದ್ರ ಮಟ್ಟದಿಂದ ಅಳೆದ ಅತ್ಯಂತ ಎತ್ತರದ ಪರ್ವತ ಎಂದರೆ ಅದು ಖಂಡಿತ ಮೌಂಟ್ ಎವರೆಸ್ಟ್ ಹೌದು...!! ಆದರೆ..!!!!! ಪರ್ವತದ ತಳದಿಂದ ಅದರ ತುದಿಯವರೆಗಿನ ಎತ್ತರವನ್ನು ಅಳೆದರೆ... ಎವರೆಸ್ಟ್ ಗಿಂತಲೂ ಸುಮಾರು ೩೦೦೦ ಅಡಿಗಳಷ್ಟು ಹೆಚ್ಚು ಎತ್ತರದ ಪರ್ವತವೊಂದಿದೆ...!!! ಆದೇ.. ಹವಾಯಿ ದ್ವೀಪಗಳ ಸಮೂಹದ ಸಮುದ್ರದಲ್ಲಿ ಕಂಡುಬರುವ ‘ಮೌನಾ ಕಿಯಾ‘ ಎಂಬ ಪರ್ವತ...!!!! ತಳದಿಂದ ಇದರ ಎತ್ತರವನ್ನು ೩೩,೪೬೫ ಅಡಿ ಎಂದು ದಾಖಲಿಸಲಾಗಿದೆ, ಅಂದರೆ ಇದರ ಎತ್ತರ ಎನರೆಸ್ಟ್ ಗಿಂತ ೪,೪೩೬ ಅಡಿ ಅಧಿಕ. ಆದರೆ ಈ ಪರ್ವತದ ೧೩,೭೯೬ ಅಡಿ ಭಾಗ ಮಾತ್ರ ಸಮುದ್ರದಿಂದ ಹೊರಚಾಚಿದೆ.



Thursday, April 9, 2009

ಜೊತೆ-ಜೊತೆ


ಜೊತೆ-ಜೊತೆ

ಮನಸು ಮುದುಡಿದೆ
ಮನವ ಕಲಕಿದೆ
ಮನಮೆಚ್ಚಿದವ
ಮನಚುಚ್ಚಿದರೆ

ಗೆಣೆಯರ ಮಧ್ಯೆ
ಗೇಣೂ ಇಲ್ಲದ್ದು,
ಒಮ್ಮೆಗೇ ಹೀಗಾಯಿತೇಕೆ?
ಗೋಣು ಮುರಿದಂತೆ
ಗೋಳಾಡಿಸಿದ್ದು

ಎಲ್ಲದಕು ಅವನು
ಸಲ್ಲುವನು ಬಿಡನು
ಮೆಲ್ಲಮೆಲ್ಲಗೆ ಏಕೆ
ನಿಲ್ಲುವನು ದೂರ?

ಕಣ್ಣಂಚಿನ ಮಿಂಚನು
ಬೆಂಚಂಚಿನ ಸಂಚನು
ಇಂಚಿಂಚು ಅರಿತವನು
ಸಂಚಿಗೇಕೆ ಬಲಿಯಾದನು?

ಅವನ ಬಾಲ್ಯ ಜೊತೆ-ಜೊತೆ
ಕೌಮಾರ್ಯ ಜೊತೆ-ಜೊತೆ
ಶಾಲೆಯುದ್ದಕ್ಕೂ ಜೊತೆ
ಕಾಲೇಜಿನ ಕೀಟಲೆಗೂ ಜೊತೆ
ಬಾಳ ಬವಣೆಯಲೂ ಜೊತೆ
ಅಪಾರ್ಥವ ಅರ್ಥೈಸಿ ಸರಿಮಾಡಿ
ಮತ್ತೆ ಆಗಿ ಬಿಟ್ಟೆವು ಜೊತೆ-ಜೊತೆ

Friday, April 3, 2009

(ಅ)ರಾಜಕಾರಣಿ

ರಾಜಕಾರಣಿ.. ರಾಜಕಾರಣಿ ಓಟು ಬೇಕೆ..?
ಓಟು ಕೊಂಡು ನಮ್ಮ-ನಮ್ಮೊಳಗೇ ತಂದಿಡಬೇಕೆ..?

ರಾಜಕಾರಣಿ ಓಟು ಕೊಂಡು ಏನು ಮಾಡುವೆ ?
ಕುರ್ಚಿಗಂಟಿ ರಕ್ತಹೀರಿ ಸ್ವಿಸ್ಸುಬ್ಯಾಂಕಿನಲ್ಲಿ ಕೋಟಿಮಾಡುವೆ

ರಾಜಕಾರಣಿ ಕುರ್ಚಿ ಸಿಗದೆ ಹೋದರೆ ಏನು ಮಾಡುವೆ..?
ಅನ್ನವಿಟ್ಟ ತಟ್ಟೆಯಲ್ಲಿ holeಉ ಮಾಡುವೆ

ರಾಜಕಾರಣಿ ನಿನ್ನನೆಚ್ಚಿ ಓಟುಕೊಟ್ಟರೆ
ಬಡವ ತನ್ನ ಒಳಿತಿಗಾಗಿ ಧಣಿಯ ನೆಚ್ಚಿಕುಂತರೆ
ರೈತ ತನ್ನ ಸಾಲ ಹೊರೆಯ ಹೊತ್ತು ಕುಂತರೆ
ಸ್ಕೂಲು ಮಕ್ಕಳೆಲ್ಲ ಓದಲು ಕತ್ತಲು ಕಳೆವುದೆಂದುಕೊಂಡರೆ
ಹೆಮ್ಮಕ್ಕಳು ತಮಗೂ ಮೀಸಲಾತಿ ಅರಸಿ ನೆಡೆದಿರೆ
ಹೇಳು ಎಲ್ಲರಾಸೆ ನೆರವೇರಲು ಏನು ಮಾಡುವೆ..?

ನನ್ನ ಮಗ, ಅಳಿಯ, ಹೆಂಡ್ತಿಗಾಗಿ ಒಂದೊಂದು ಛೇರು
ಸ್ವಿಸ್ಸ್ ನಲ್ಲಿ ಜಮಾವಣೆ, ಬಂಗ್ಲೆ ಬಂಡಿ ಜಮೀನು ಚೂರು
ನಮ್ಮವರೆಲ್ಲರ ಹೆಸರಲ್ಲೊಂದು ನೂರೋ ಇನ್ನೂರೋ ಶೇರು
ಆದಮೇಲೆ...ನನ್ನವರಿಗೆ ನೌಕರಿ, ನನ್ನ ಜಾತಿಯವರ ಚಾಕರಿ
ಅಧಿಕಾರಿಗಳಿಗೆ ಬಢೋತರಿ, ಪುಢಾರಿಗಳಿಗೆ ಛೋಕರಿ...
ಹೀಗೆಲ್ಲ ಪಟ್ಟಿರುವೆ ಈ ಐದು ವರ್ಷದಲ್ಲಿ ಎಷ್ಟೊಂದು ಬವಣೆ
ಓಟುಕೊಟ್ಟವನ ನೆನಪಾಗುವುದರಲ್ಲಿ ಬಂದೇ ಬಿಡ್ತು ಚುನಾವಣೆ

ಅದಕ್ಕೆ ಈಗ ಬಂದಿರುವೆ ನಿಮ್ಮೆಲ್ಲರ ಮುಂದೆ
ಬಾಕಿ ಇರುವ ಕೆಲಸವನ್ನು ಪೂರೈಸೋಣವೆಂದೇ
ಅಮ್ಮ, ಅಪ್ಪ, ಅಕ್ಕ ಆಣ್ಣಗಳಿರಾ ಕೊಡಿ ನಿಮ್ಮ ಅಮೂಲ್ಯ ಓಟು
ಈ ಬಾರಿ ಪೂರೈಸುವೆ ಆಶ್ವಾಸನೆ, ತರುವೆ ನಿಮ್ಮ ಮನೆಗೆ ಲೈಟು.

ಆಶ್ವಾಸನೆಗಳ ಶ್ವಾನವಿದು,
ನಾಯಿಹೆಸರಿಗೆ ಅಪಚಾರವಿದು,
ಅದು ಅನ್ನ ತಿಂದು ಮನೆಕಾಯ್ವದು
ಇದು ತಿಂದ ಮನೆಗೇ ಕನ್ನ ಕೊರೆವುದು.