Thursday, September 29, 2011

ಮನುವಚನ್ -ಚಿತ್ರಕ್ಕೆ ನನ್ನ ಕವನ

(ಚಿತ್ರ: ಮನುವಚನ್ ನ ಛಾಯಾಗ್ರಹಣ ಕೌಶಲ್ಯ)
ಇದರಿಂದ ಹುಟ್ಟಿದ ಹಸಿರುಳಿಸೆನುವ ಕಾಳಜಿಯ ಕವನ

ಎಲೆಮೇಲೆಳೆಹನಿ
ಎಲೆಯಮೇಲೆಳೆಹನಿ...
ಮಳೆಕರಗಿ ಹನಿಸಿತೇ?
ಇಲ್ಲಾ ಎಲೆಬೆವರಿತೇ..?
ಉಸಿರ್ಕಟ್ಟಿ ಪ್ರದೂಷಣೆಗೆ
ಬೇರ-ಬೇರ್ಕೊಂಡ ಬವಣೆಗೆ
ಕಾಂಡಕೆ ಬಿದ್ದ ಕೊಡಲಿಗೆ..??
ಇಲ್ಲಾ.. ಪಾರ್ಕನೂ ನುಂಗುವ
ಹಸಿರ್ಹಾಸುಗೆಗೂ ಲಗ್ಗೆ
ಎಗ್ಗು-ನೆಗ್ಗಿಲ್ಲದ ಭೂಕಬಳಿಕೆಗೆ..
ಭೂಗರ್ಭವನೂ ಬಗೆವವಗೆ
ಹೆದರಿ ಚಿಗುರೆಯಾಗಿ
ಚಿಗುರೊಡೆಯದಾಗುವ
ಮತ್ತೆಲೆ ಬಾರದೋ ಎನುವ
ಭಯಕೆ..ನಭಕೆ ತಲೆಯೆತ್ತಿ
ಬೇಡುತಾ ಅಳುತಿದೆಯೇ..??
ಕಣ್ಣ ಹನಿಸುವ ಹನಿಯ
ಕನಿಕರಿಸೆನುವ ದನಿಯೇ..??
ಹಸಿರಳಿದರೆ ಉಸಿರುಳಿಯದು
ಬೇಡ ಭಯ ಎಲೆ ಎಲೆಯೇ
ನೀನು, ಮನುಕುಲಕಿರುವ
ಅಳಿವುಳಿವಿನ ಏಕೈಕ ಸೆಲೆಯೇ.

Monday, September 12, 2011

ಬುಂಡೆ ಕ್ಯಾತೆ



ಏನ್ಲಾ ಬುಂಡೆ ನಾಗ ಎಸ್ರು ಎಸ್ರುವಾಸಿ ಆಗ್ತಾ ಐತೆ?
ಬೋ ಪೈನಾಗಿ ಬೆಳ್ದಿದ್ವು ಕೂದ್ಲು ಆವಾಗ
ಎಗರ್ಸ್ಕೊಂಡ್ ಓಡಾಡಿದ್ದು..ಜುಟ್ ಬಿಟ್ ಜೂಲ್ನಾಗ ಆಗಿದ್ದು..
ವೈನಾಗಿ ತಲೆಬಾಚಿ ಜೀನ್ಸ್ ಆಕಿ ಅರೆ-ರಾಮ ಅರೆ-ಕಿಸ್ನ ಆಗಿದ್ದು
ಬೆಲ್ ಬಾಟಮ್ ಈಟಗ್ಲ ಆಕಿ ಪುಕ್ಸಟ್ಟೆ ರಸ್ತೆ ಎಲ್ಲಾ ಗುಡ್ಸಿದ್ದು..!!!
ಎಲ್ ಲ್ಲಾ ಓಯ್ತು ಎಲ್ಲಾನೂವೆ...??

ಕೆರ್ಯಾಗಿನ್ನೀರ್ಮುಗ್ದು ಕುರ್ಚುಲ್ಬೆಳ್ಯೋಂಗೆ
ಅಲ್ಲಲ್ಲಿ ಒಂದೊಂದೇ ಚಿಗ್ರಕ್ಕೊಂಡ್ ಕುಂತಂಗೆ
ಗರ್ಕೆ ಮಾತ್ರ ಇತ್ಲಾಗ್ ವೈನಾಗ್ಬೆಳ್ದಂಗೆ
ತ್ವಾಟ ಎಲ್ಲಾ ಖಾಲಿ ಮಾಡ್ಕಂಡ್ಕೂತಿದ್ದೀಯಾ

ಓಗ್ಲಿ ಅತ್ಲಾಗೆ ಅಂದ್ರೆ..ಲಾನ್ ಮಿಸೀನು ಆಕಿ ಬೋಡ್ಸಿದ್ದ್ಯಾಕ್ಲಾ??
ಬಂಜ್ರು ಎದ್ದು ಕುಂತದೆ, ನೆತ್ತಿಮ್ಯಾಗೆ ಬೆಳೀಯೊಲ್ದು ಅಂತಾ
ಮೂರೋನಾಲ್ಕೋ ತಿಣಕಾಡ್ತಾ ಇದ್ದದು..
ಬಣ್ಣ ಗಿನ್ಣ ಅಚ್ಚಿದ್ಯೇನ್ಲಾ ಬೆಳ್ಳಗಾಗಿಲ್ಲ??

ಟೋಪೀನಾದ್ರೂ ಆಕ್ಕೊಂಡ್ ಓಡಾಡು..
ಕತ್ಲಾಗ್ ಮಕ್ಳು-ಎಂಗಸ್ರು ನೋಡಿದ್ರೆ ಎದ್ರ್ಕೊಂಡಾರು
ಅಲ್ಕಲ್ಲಾ ಯಾವನ್ಲಾ ಪೋಟಾ ತಗ್ದವನು..??
ಮಕಾ ಕಾಣಂಗಲ್ವಾ ತೆಗ್ಯಾದು..??

ಒಬ್ರು ಗುಂಡ ಎಂಕ ಅಂತಾರೆ; ಇನ್ನೊಬ್ರು ಗಾಬ್ರಿ ಬಸ್ಯ ಅಂತಾರೆ
ಅಲ್ಲೊಬ್ರು ಸಿಡ್ಕ ಸಿದ್ದ ಅಂದ್ರೆ; ಇಲ್ಲೊಬ್ರು ಡೌಟೇ ಬ್ಯಾಡ ಇದು
ನಮ್ಮಟ್ಟೀ ಕೋಳಿಕಳ್ಳ ಕರಿಯಾ ಅಂತಾರೆ
ಆಮೇಲೊಬ್ರು ಎಲ್ಡು ಸುಳಿಯವೆ....ಇದು ಸುಬ್ಬಾನೇ ಅಂತಾರೆ.
ಎಲ್ಲಾ ಬುಟ್ಟ್ ಪೂರ್ತಾ ಮನ್ಸನ್ ಪೋಟೋ ಆಕೇ ಬುಡು..
ನಂಗೊತೋ ನೀನ್ಬುಂಡೆ ನಾಗ ಅಂತಾ....!!!