Monday, April 13, 2009

ಸಾಗರಗಳು----ಮುಂದುವರೆದು,...
ನಾವು ಸಮುದ್ರ ತೀರದ beach ವಾತಾವರಣವನ್ನು ಗೆಳೆಯರೊಂದಿಗೆ, ಪರಿವಾರದೊಂದಿಗೆ ಹೋಗಿ ಅಸ್ವಾದಿಸುತ್ತಾ ವಿಹರಿಸುತ್ತೇವೆ. ಮಂಗಳೂರಿನ ಉಳ್ಳಾಲ,ಸೋಮೇಶ್ವರ ಅಥವಾ ಪಣಂಬೂರಿನ ಸಮುದ್ರ ತೀರಗಳನ್ನು ನೋಡಲು ಭಾನುವಾರ ನಾವು ಹಾಸ್ಟೆಲ್ ನಿಂದ ಮಧ್ಯಾನ್ಹದ ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆದು ಹೊರಟುಬಿಡುತ್ತಿದ್ದೆವು. ದಿನವಿಡೀ ಬಿಸಿಲಿನಲ್ಲಿ ದಣಿದು ಸ್ವತಃ ಸೂರ್ಯನೇ ಸಮುದ್ರದಲ್ಲಿ ಮುಳುಗಲು ಹೋಗುತ್ತಿದಾನೋ ಎನ್ನಿಸುವಂತೆ ಪಶ್ಚಿಮದ ದಿಗಂತ ಕೆಂಪಾಗಿ ನಂತರ ಕೇಸರಿಯಾಗಿ ನಂತರ ಕ್ರಮೇಣ ಸೂರ್ಯ ಸಮುದ್ರದೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡನೋ ಎನ್ನುವಂತೆ ಭಾಸವಗುತ್ತಿತ್ತು. ತೀರವನ್ನು ಸಮೀಪಿಸುತ್ತಿದ್ದಂತೆ ಸಮುದ್ರದ ಅಲೆಗಳು ಎತ್ತರಕ್ಕೆ ಬೆಳೆಯುತ್ತಾ ಎಲ್ಲಿ ಮರಳಿನ ಮೇಲೆ ಕುಳಿತ ನಮ್ಮ ಮೇಲೆ ಅಪ್ಪಳಿಸುತ್ತವೆಯೋ ಎನ್ನುವಂತೆ ಹತ್ತಿರವಾಗುತ್ತಾ..ಎತ್ತರ ಹೆಚ್ಚಾಗಿ ಶಿಖರ ಮುರಿದಂತೆ ಮೇಲ್ಪದರ ಮುರಿದು ತನ್ನದೇ ಪಾದಕ್ಕೆ ಬೀಳುತ್ತಾ ಉರುಳಿಬಿಡುತ್ತಾ ನಮ್ಮ ಹೆದರಿಸಿದಂತೆ ಮಾಡಿ ಕರಗಿಬಿಡುತ್ತಿದ್ದವು.

ಸಮುದ್ರದ ಅಲೆಗಳು ಹೇಗೆ ಉತ್ಭವಿಸುತ್ತವೆ?
ಸಮುದ್ರ ತೀರದಲ್ಲಿ ಕುಳಿತು ಮೇಲೆ ಹೇಳಿದಂತೆ ಅನುಭವಿಸಿದ ಬಹುಶಃ ಎಲ್ಲರ
ಮನಸ್ಸಲೂ ಮೂಡುವ ಪ್ರಶ್ನೆಯಿದು. ಗಾಳಿಯಿಂದ ಅಲೆಗಳು ಹುಟ್ಟುತ್ತವೆ ಎಂದು ಹೇಳುವವರೂ ಸ್ವಲ್ಪಮಟ್ಟಿಗೆ ಸರಿಯೇ, ಆದರೆ ಇದು ಸಣ್ಣಪುಟ್ಟ ಕುಂಟೆ, ಕೆರೆ ಬಾವಿ ಗೆ ಬಹುಶಃ ಹೆಚ್ಚು ಸೂಕ್ತ. ಸಮುದ್ರದಷ್ಟು ಅಗಾಧ ಜಲರಾಶಿಯನ್ನು ಬರಿಯ ಗಾಳಿ ಅಲುಗಾಡಿಸುವುದೆಂದರೆ ಅಷ್ಟು ನಿಜವಲ್ಲ. ಭೂಮಿಯ ಚಲನೆ, ಚಂದ್ರನ ಗುರುತ್ವಾಕರ್ಷಣೆ ಹಾಗೂ ಸಮುದ್ರ ತಲದ ರೂಪರೇಶೆಗಳು ಗಾಳಿಯ ಪ್ರಭಾವವನ್ನು ಹೆಚ್ಚಿಸುತ್ತವೆ. ಗಾಳಿಯ ಒತ್ತಡ ಅಥವಾ ವಾಯುಭಾರದ ಕುಸಿತ ಸಮುದ್ರದ ಅಲೆಗಳ ಮೇಲೆ ಹೆಚ್ಚು ಪರಿಣಾಮವನ್ನುಂಟುಮಾಡುತ್ತದೆ. ಚಂಡಮಾರುತದ ಮುಖ್ಯ ಕಾರಣ ಇದೇ ಆಗಿದೆ. ಇನ್ನು ಸುನಾಮಿ ಎನ್ನುವುದು ವಾಯುಭಾರ ಕುಸಿತದೊಂದಿಗೆ ಭೂಕಂಪನದ ವಿಕೋಪಸೇರಿ ನೈಸರ್ಗಿಕ ಮಹಾವಿಕೋಪವಾಗುತ್ತದೆಂದು ನಮಗೆಲ್ಲಾ ಈ ಗಾಗಲೇ ತಿಳಿದಿದೆ.



ಸಾಮಾನ್ಯ ಪರಿಸ್ಥಿತಿಗಳಲ್ಲಿ ಸಮುದ್ರ ಅಲೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸಲು ಇಛ್ಚಿಸುತ್ತೇನೆ.
ಸಮುದ್ರದ ತೀರದಿಂದ ದೂರಕ್ಕೆ ಹೋದಂತೆ ಆಳ ಹೆಚ್ಚುತ್ತದೆ ಎಂದು ನಿಮಗೆ ತಿಳಿದೇ ಇದೆ. ಇದು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ತೀರದಿಂದ ಸುಮಾರು ದೂರದವರೆಗೂ ಆಳ ಕಡಿಮೆಯಿರುತ್ತದೆ (ಭೂಮಂಡಲದ ರಚನೆಯ ಆಧಾರದ ಮೇಲೆ ಇದರಲ್ಲಿ ವ್ಯತ್ಯಾಸಗಳಿರಬಹುದು). ಈ ಇಳಿಜಾರಿನ ಪ್ರದೇಶವನ್ನು continetal shelf (ಭೂಖಂಡ ಇಳಿಜಾರು) ಎನ್ನಲಾಗುತ್ತದೆ (ಚಿತ್ರ ನೋಡಿ). ಆನಂತರ ಇಳಿಜಾರು ಸ್ವಲ್ಪ ಕಡಿದಾಗಿತ್ತದೆ, ಈ ಭಾಗವನ್ನು contonental slope (ಭೂಖಂಡ ಕಡಿದು ಇಳಿಜಾರು) ಮತ್ತು ಆಳ ಭಾಗವನ್ನು deep sea (ಆಳ ಸಮುದ್ರ) ಎನ್ನಲಾಗುತ್ತದೆ. ಆಳವುಳ್ಳ ಸಮುದ್ರದ ಮೇಲ್ಭಾಗದಲ್ಲಿ ನೀರಿನ ಸಾಂದ್ರತೆ (ತೂಕ), ಭೂಮಿಯ ಚಲನ ಮತ್ತು ಗುರುತ್ವಗಳಿಂದ ಇಡೀ ಜಲಪದರ ಮೇಲೆ-ಕೆಳಗೆ ಆಡುತ್ತಿರುತ್ತದೆ. ಇದನ್ನು ಉಬ್ಬರಗಳು ಅಥವಾ ಸ್ವೆಲ್ಸ್ (swells) ಎನ್ನುತ್ತಾರೆ. ಈ ಉಬ್ಬರಗಳು ಮೇಲೆ ಕೆಳಗೆ ಆಡುವುದರಿಂದ ಆಳ ಸಮುದ್ರದ
ಪ್ರದೇಶದಲ್ಲಿ ಅಷ್ಟಾಗಿ ಮನವರಿಕೆಯಾಗದಷ್ಟು ಅಲೆಗಳು ಇರುತ್ತವೆ ಎನ್ನಬಹುದು. ಈ ಉಬ್ಬರಗಳು ಭೂಖಂಡದ ಇಳಿಜಾರನ್ನು ತಲುಪಿದಾಗ ಭೂಭಾಗ ನೀರಿನ ಪದರವನ್ನು ಪುಟಿಸುತ್ತದೆ. ಆಗ ಉಬ್ಬರದ ಅಬ್ಬರ ಸ್ವಲ್ಪ ಹೆಚ್ಚಾಗುತ್ತದೆ. ಭೂಭಾಗದ ಇಳಿಜಾರು ತೀರಕ್ಕೆ ಹತ್ತಿರವಾಗುತ್ತಾ ಉಬ್ಬರದ ಅಬ್ಬರ ಹೆಚ್ಚಾಗುತ್ತಾ ಅಲೆಯ ರೂಪ ಪಡೆಯುತ್ತದೆ. ಹೀಗೆ ಏರುವ ಅಲೆ ತೀರವನ್ನು ಸಮೀಪಿಸಿದಂತೆ ಎತ್ತರ ಹೆಚ್ಚಾಗಿ ತೀರದ ಭೂಮಿಯ ತಡೆಯೂ ಹೆಚ್ಚಾಗಿ ಒಂದು ಹಂತದ ಎತ್ತರಕ್ಕೆ ಹೋದ ಅಲೆಯ ಮೇಲ್ಭಾಗ ಮುರಿದು ಬೀಳುತ್ತದೆ ಆಗ ಅಲೆ ನಿಧಾನವಾಗಿ ತೀರದಲ್ಲಿ ವರ್ತುಲ ಪೂರೈಸಿ ಮತ್ತೆ ಸಮುದ್ರದತ್ತ ನಡೆಯುತ್ತದೆ. ಚಂಡಮಾರುತ ಅಥವಾ ಸುನಾಮಿ ಮುಂತಾದ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮೇಲೇರುವ ನೀರಿನ ಪ್ರಮಾಣ ಅಧಿಕವಾಗುವುದರಿಂದ ಅದು ತನ್ನ ಸಹಜ ತೀರ ಪ್ರದೇಶವನ್ನು ಮೀರಿ ಮುನ್ನಡೆಯುತ್ತದೆ.

1 comment:

  1. ಜಲನಯನ ಮೇಡಮ್,

    ಸಮುದ್ರದ ಅಲೆಗಳ ಒಂದು ಸುಂದರ ವೈಜ್ಞಾನಿಕ ತಳಹದಿಯಲ್ಲಿ ಸೊಗಸಾದ ಮತ್ತು ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ...ಧನ್ಯವಾದಗಳು..

    ಬಿಡುವಾದಾಗ ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ...
    http://chaayakannadi.blogspot.com/

    ReplyDelete