Monday, April 13, 2009

ಸಾಗರಗಳು----ಮುಂದುವರೆದು,...
ನಾವು ಸಮುದ್ರ ತೀರದ beach ವಾತಾವರಣವನ್ನು ಗೆಳೆಯರೊಂದಿಗೆ, ಪರಿವಾರದೊಂದಿಗೆ ಹೋಗಿ ಅಸ್ವಾದಿಸುತ್ತಾ ವಿಹರಿಸುತ್ತೇವೆ. ಮಂಗಳೂರಿನ ಉಳ್ಳಾಲ,ಸೋಮೇಶ್ವರ ಅಥವಾ ಪಣಂಬೂರಿನ ಸಮುದ್ರ ತೀರಗಳನ್ನು ನೋಡಲು ಭಾನುವಾರ ನಾವು ಹಾಸ್ಟೆಲ್ ನಿಂದ ಮಧ್ಯಾನ್ಹದ ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆದು ಹೊರಟುಬಿಡುತ್ತಿದ್ದೆವು. ದಿನವಿಡೀ ಬಿಸಿಲಿನಲ್ಲಿ ದಣಿದು ಸ್ವತಃ ಸೂರ್ಯನೇ ಸಮುದ್ರದಲ್ಲಿ ಮುಳುಗಲು ಹೋಗುತ್ತಿದಾನೋ ಎನ್ನಿಸುವಂತೆ ಪಶ್ಚಿಮದ ದಿಗಂತ ಕೆಂಪಾಗಿ ನಂತರ ಕೇಸರಿಯಾಗಿ ನಂತರ ಕ್ರಮೇಣ ಸೂರ್ಯ ಸಮುದ್ರದೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡನೋ ಎನ್ನುವಂತೆ ಭಾಸವಗುತ್ತಿತ್ತು. ತೀರವನ್ನು ಸಮೀಪಿಸುತ್ತಿದ್ದಂತೆ ಸಮುದ್ರದ ಅಲೆಗಳು ಎತ್ತರಕ್ಕೆ ಬೆಳೆಯುತ್ತಾ ಎಲ್ಲಿ ಮರಳಿನ ಮೇಲೆ ಕುಳಿತ ನಮ್ಮ ಮೇಲೆ ಅಪ್ಪಳಿಸುತ್ತವೆಯೋ ಎನ್ನುವಂತೆ ಹತ್ತಿರವಾಗುತ್ತಾ..ಎತ್ತರ ಹೆಚ್ಚಾಗಿ ಶಿಖರ ಮುರಿದಂತೆ ಮೇಲ್ಪದರ ಮುರಿದು ತನ್ನದೇ ಪಾದಕ್ಕೆ ಬೀಳುತ್ತಾ ಉರುಳಿಬಿಡುತ್ತಾ ನಮ್ಮ ಹೆದರಿಸಿದಂತೆ ಮಾಡಿ ಕರಗಿಬಿಡುತ್ತಿದ್ದವು.

ಸಮುದ್ರದ ಅಲೆಗಳು ಹೇಗೆ ಉತ್ಭವಿಸುತ್ತವೆ?
ಸಮುದ್ರ ತೀರದಲ್ಲಿ ಕುಳಿತು ಮೇಲೆ ಹೇಳಿದಂತೆ ಅನುಭವಿಸಿದ ಬಹುಶಃ ಎಲ್ಲರ
ಮನಸ್ಸಲೂ ಮೂಡುವ ಪ್ರಶ್ನೆಯಿದು. ಗಾಳಿಯಿಂದ ಅಲೆಗಳು ಹುಟ್ಟುತ್ತವೆ ಎಂದು ಹೇಳುವವರೂ ಸ್ವಲ್ಪಮಟ್ಟಿಗೆ ಸರಿಯೇ, ಆದರೆ ಇದು ಸಣ್ಣಪುಟ್ಟ ಕುಂಟೆ, ಕೆರೆ ಬಾವಿ ಗೆ ಬಹುಶಃ ಹೆಚ್ಚು ಸೂಕ್ತ. ಸಮುದ್ರದಷ್ಟು ಅಗಾಧ ಜಲರಾಶಿಯನ್ನು ಬರಿಯ ಗಾಳಿ ಅಲುಗಾಡಿಸುವುದೆಂದರೆ ಅಷ್ಟು ನಿಜವಲ್ಲ. ಭೂಮಿಯ ಚಲನೆ, ಚಂದ್ರನ ಗುರುತ್ವಾಕರ್ಷಣೆ ಹಾಗೂ ಸಮುದ್ರ ತಲದ ರೂಪರೇಶೆಗಳು ಗಾಳಿಯ ಪ್ರಭಾವವನ್ನು ಹೆಚ್ಚಿಸುತ್ತವೆ. ಗಾಳಿಯ ಒತ್ತಡ ಅಥವಾ ವಾಯುಭಾರದ ಕುಸಿತ ಸಮುದ್ರದ ಅಲೆಗಳ ಮೇಲೆ ಹೆಚ್ಚು ಪರಿಣಾಮವನ್ನುಂಟುಮಾಡುತ್ತದೆ. ಚಂಡಮಾರುತದ ಮುಖ್ಯ ಕಾರಣ ಇದೇ ಆಗಿದೆ. ಇನ್ನು ಸುನಾಮಿ ಎನ್ನುವುದು ವಾಯುಭಾರ ಕುಸಿತದೊಂದಿಗೆ ಭೂಕಂಪನದ ವಿಕೋಪಸೇರಿ ನೈಸರ್ಗಿಕ ಮಹಾವಿಕೋಪವಾಗುತ್ತದೆಂದು ನಮಗೆಲ್ಲಾ ಈ ಗಾಗಲೇ ತಿಳಿದಿದೆ.



ಸಾಮಾನ್ಯ ಪರಿಸ್ಥಿತಿಗಳಲ್ಲಿ ಸಮುದ್ರ ಅಲೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸಲು ಇಛ್ಚಿಸುತ್ತೇನೆ.
ಸಮುದ್ರದ ತೀರದಿಂದ ದೂರಕ್ಕೆ ಹೋದಂತೆ ಆಳ ಹೆಚ್ಚುತ್ತದೆ ಎಂದು ನಿಮಗೆ ತಿಳಿದೇ ಇದೆ. ಇದು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ತೀರದಿಂದ ಸುಮಾರು ದೂರದವರೆಗೂ ಆಳ ಕಡಿಮೆಯಿರುತ್ತದೆ (ಭೂಮಂಡಲದ ರಚನೆಯ ಆಧಾರದ ಮೇಲೆ ಇದರಲ್ಲಿ ವ್ಯತ್ಯಾಸಗಳಿರಬಹುದು). ಈ ಇಳಿಜಾರಿನ ಪ್ರದೇಶವನ್ನು continetal shelf (ಭೂಖಂಡ ಇಳಿಜಾರು) ಎನ್ನಲಾಗುತ್ತದೆ (ಚಿತ್ರ ನೋಡಿ). ಆನಂತರ ಇಳಿಜಾರು ಸ್ವಲ್ಪ ಕಡಿದಾಗಿತ್ತದೆ, ಈ ಭಾಗವನ್ನು contonental slope (ಭೂಖಂಡ ಕಡಿದು ಇಳಿಜಾರು) ಮತ್ತು ಆಳ ಭಾಗವನ್ನು deep sea (ಆಳ ಸಮುದ್ರ) ಎನ್ನಲಾಗುತ್ತದೆ. ಆಳವುಳ್ಳ ಸಮುದ್ರದ ಮೇಲ್ಭಾಗದಲ್ಲಿ ನೀರಿನ ಸಾಂದ್ರತೆ (ತೂಕ), ಭೂಮಿಯ ಚಲನ ಮತ್ತು ಗುರುತ್ವಗಳಿಂದ ಇಡೀ ಜಲಪದರ ಮೇಲೆ-ಕೆಳಗೆ ಆಡುತ್ತಿರುತ್ತದೆ. ಇದನ್ನು ಉಬ್ಬರಗಳು ಅಥವಾ ಸ್ವೆಲ್ಸ್ (swells) ಎನ್ನುತ್ತಾರೆ. ಈ ಉಬ್ಬರಗಳು ಮೇಲೆ ಕೆಳಗೆ ಆಡುವುದರಿಂದ ಆಳ ಸಮುದ್ರದ
ಪ್ರದೇಶದಲ್ಲಿ ಅಷ್ಟಾಗಿ ಮನವರಿಕೆಯಾಗದಷ್ಟು ಅಲೆಗಳು ಇರುತ್ತವೆ ಎನ್ನಬಹುದು. ಈ ಉಬ್ಬರಗಳು ಭೂಖಂಡದ ಇಳಿಜಾರನ್ನು ತಲುಪಿದಾಗ ಭೂಭಾಗ ನೀರಿನ ಪದರವನ್ನು ಪುಟಿಸುತ್ತದೆ. ಆಗ ಉಬ್ಬರದ ಅಬ್ಬರ ಸ್ವಲ್ಪ ಹೆಚ್ಚಾಗುತ್ತದೆ. ಭೂಭಾಗದ ಇಳಿಜಾರು ತೀರಕ್ಕೆ ಹತ್ತಿರವಾಗುತ್ತಾ ಉಬ್ಬರದ ಅಬ್ಬರ ಹೆಚ್ಚಾಗುತ್ತಾ ಅಲೆಯ ರೂಪ ಪಡೆಯುತ್ತದೆ. ಹೀಗೆ ಏರುವ ಅಲೆ ತೀರವನ್ನು ಸಮೀಪಿಸಿದಂತೆ ಎತ್ತರ ಹೆಚ್ಚಾಗಿ ತೀರದ ಭೂಮಿಯ ತಡೆಯೂ ಹೆಚ್ಚಾಗಿ ಒಂದು ಹಂತದ ಎತ್ತರಕ್ಕೆ ಹೋದ ಅಲೆಯ ಮೇಲ್ಭಾಗ ಮುರಿದು ಬೀಳುತ್ತದೆ ಆಗ ಅಲೆ ನಿಧಾನವಾಗಿ ತೀರದಲ್ಲಿ ವರ್ತುಲ ಪೂರೈಸಿ ಮತ್ತೆ ಸಮುದ್ರದತ್ತ ನಡೆಯುತ್ತದೆ. ಚಂಡಮಾರುತ ಅಥವಾ ಸುನಾಮಿ ಮುಂತಾದ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮೇಲೇರುವ ನೀರಿನ ಪ್ರಮಾಣ ಅಧಿಕವಾಗುವುದರಿಂದ ಅದು ತನ್ನ ಸಹಜ ತೀರ ಪ್ರದೇಶವನ್ನು ಮೀರಿ ಮುನ್ನಡೆಯುತ್ತದೆ.

Saturday, April 11, 2009

ಗೆಳೆಯರೇ ಸಮುದ್ರಗಳ ಬಗ್ಗೆ ಮಾಹಿತಿ ಕೊಡಬೇಕೆಂಬ ಯೋಚನೆಯಿಂದ ಈ ಶೃಂಖಲೆಯನ್ನು ಪ್ರಾರಂಭಿಸುತ್ತಿದ್ದೇನೆ. ಮೊದಲ ಕಂತಿನಲ್ಲಿ ಸಮುದ್ರಗಳ ಬಗ್ಗೆ ಕ್ಲುಪ್ತ ಮಾಹಿತಿ ಮತ್ತು ಕ್ರಮೇಣ ವಿವರಗಳನ್ನು ನೀಡಬೇಕೆಂಬುದೇ ನನ್ನ ಆಶಯ.








ನಮ್ಮ ಸಾಗರ-ಸಮುದ್ರ ಸಂಪತ್ತು -1

ಭೂಮಂಡಲದ ಶೇ ೭೦ ಭಾಗ ಸಮುದ್ರಗಳಿಂದ ಕೂಡಿದೆ. ಈ ಅಗಾಧ ಜಲರಾಶಿಯೇ ಸಕಲ ಜೀವೋದ್ಭವಕ್ಕೆ ದಾರಿಯಾಯಿತೆಂದರೆ ಜಲ ಮತ್ತು ಜೀವಗಳ ಮಧ್ಯೆ ಇರುವ ಅಪೂರ್ವ ಸಂಬಂಧ ಎಷ್ಟೊಂದು ಗಾಢವಾದುದು ಎಂದು ತಿಳಿಯುತ್ತದೆ. ಎಲ್ಲ ಸಮುದ್ರಗಳೂ ಉಪ್ಪುನೀರಿನಿಂದ ಕೂಡಿದ್ದು, ಭೂಭಾಗದ ಲವಣಾಂಶಗಳ ಕರಗುವಿಕೆಯಿಂದ ನದಿಗಳಿಂದ ಹರಿದುಬಂದು ಸಮುದ್ರ ಸೇರಿದ ನದಿನೀರು ಉಪ್ಪಾಗಲು ಕಾರಣವಾಗುತ್ತದೆ. ಸಮುದ್ರದ ನೀರಿನಲ್ಲಿ ಸರಾಸರಿ ೩.೫ ರಿಂದ ೪.೦ ಶೇ. ಉಪ್ಪಿನಂಶ ಇರುತ್ತದೆ. ಕೆಲ ಸಮುದ್ರಗಳಲ್ಲಿ (ನದಿಗಳ ಅಗಾಧತೆ, ಮಂಜುಕರಗುವಿಕೆ ಮತ್ತು ಅಧಿಕ ಮಳೆ ಈ ಎಲ್ಲಾ ಕಾರಣಗಳಿಂದ) ಉಪ್ಪಿನಂಶ ಕಡಿಮೆಯಿರುತ್ತದೆ. ‘ಮೃತ‘ ಅಥವಾ ‘ಸತ್ತ ಸಮುದ್ರ‘ (Dead Sea) ಎಂದೇ ಹೆಸರಾಗಿರುವ ಸಮುದ್ರದ ಉಪ್ಪಿನಂಶ ಅತ್ಯಧಿಕವಾಗಿದ್ದು ಇಲ್ಲಿ ಜೀವರಾಶಿ ಬಹಳ ವಿರಳ. ಈ ಸಮುದ್ರದ ನೀರಿನಲ್ಲಿರುವ ಉಪ್ಪಿನಂಶ ಎಷ್ಟಿರಬಹುದೆಂದು ಯೋಚಿಸಿ..!! ಪ್ರತಿ ಲೀಟರ್ ನೀರಿನಿಂದ ೩೩೦ ಗ್ರಾಂ ಉಪ್ಪನ್ನು ಪಡೆಯಬಹುದೆಂದರೆ...ಅಲ್ಲಿ ಯಾವ ಜೀವ ಉಳಿಯಲು ಸಾಧ್ಯ ಯೋಚಿಸಿ..??.!!! ಈ ಸಮುದ್ರ ಸಮುದ್ರ ಮಟ್ಟದಿಂದ ಸುಮಾರು ೪೨೦ ಮೀಟರ್ ಕೆಳಗಡೆ ಇದ್ದು, ವಾರ್ಷಿಕ ಮಳೆಪ್ರಮಾಣ ೫೦ (ದಕ್ಷಿಣ ಭಾಗ) ರಿಂದ ೧೦೦ ಮಿ.ಮೀ. ಆಗಿರುತ್ತದೆಂದು ದಾಖಲೆ ಹೇಳುತ್ತದೆ








ಸಾಗರಗಳನ್ನು ಮುಖ್ಯವಾಗಿ ಶಾಂತ (Pacific) ಸಾಗರ, ಅಟ್ಲಾಂಟಿಕ್ (Atlantic) ಸಾಗರ, ಹಿಂದೂ ಮಹಾ ಸಾಗರ, ಧೃವ ಸಾಗರ (ಉತ್ತರ ಮತ್ತು ದಕ್ಷಿಣ ಧೃವ) ಗಳೆಂದು ಹೆಸರಿಸಲಾಗಿದೆ. ಭೂಭಾಗದ ಮೂರನೇ ಒಂದು ಭಾಗ ಆವರಿಸಿರುವ ಶಾಂತ ಸಾಗರ ಅತ್ಯಂತ ವಿಶಾಲ ಸಾಗರ. ಭೂ ಮಂಡಲದ ಅತ್ಯಂತ ಆಳದ ಕಂದರ ಈ ಸಾಗರದಲ್ಲೇ ಕಂಡುಬರುತ್ತದೆ. ಇದನ್ನು Challenger's Deep (ಛಾಲೇಂಜರ್ ಕಂದರ) ಅಥವಾ Mariana Trench (ಮೆರಿಯಾನಾ ಕಂದರ) ಎನ್ನುತ್ತಾರೆ. ಈ ಕಂದರದ ಆಳ ಎಷ್ಟೆಂದರೆ...ಅತಿ ಎತ್ತರದ ಶಿಖರವಾದ ಎವೆರೆಸ್ಟನ್ನು ಸುಲಭವಾಗಿ ಸಮುದ್ರದಲ್ಲಿ ಮುಳುಗಿಸಬಹುದು...!!!! ಅಂದರೆ ಈ ಆಳ ಸುಮಾರು ೧೦ ೯೧೧ ಮೀಟರ್ ಅಥವಾ ೩೫,೭೯೭ ಅಡಿ ಎಂದು ಅಂದಾಜಿಸಲಾಗಿದೆ (ಇದರ ನಿಖರ ಆಳ ತಿಳಿಯಲಾಗಿಲ್ಲ..!!! ಇದು ಇನ್ನೂ ಆಳವಿರಬಹುದು..!!!)








ಇನ್ನು ಸಮುದ್ರದಲ್ಲಿ ಪರ್ವತಗಳಿವೆಯೇ..?? ಹೌದು..!! ಕೆಲವಂತೂ ಸಮುದ್ರ ತಳದಿಂದ ಮೇಲೆದ್ದು ಸಮುದ್ರಮಟ್ಟವನ್ನೂ ಮೀರಿ ಸಮುದ್ರದಮೇಲೆ ಕಂಡುಬಂದಿವೆ. ಭೂಭಾಗದ ಅತ್ಯಂತ ಎತ್ತರದ ಪ್ರದೇಶ ಹಿಮಾಲಯ ಪರ್ವತಗಳು ಎಂದೂ, ಎವರೆಸ್ಟ್ ಪರ್ವತ ವಿಶ್ವದ ಅತ್ಯುನ್ನತ ಪರ್ವತವೆಂದೂ ಬಹುಶಃ ಪ್ರಾಥಮಿಕ ಪಠ್ಯ ಪುಸ್ತಕಗಳ ಮೂಲಕ ತಿಳಿಸಲಾಗಿದೆ. ಇಲ್ಲಿ ಕುತೂಹಲಕರ ಅಂಶವೊಂದನ್ನು ತಿಳಿಸಲಿಚ್ಛಿಸುತ್ತೇನೆ.!! ಏನು ಗೊತ್ತೇ..?? ಅತ್ಯಂತ ಎತ್ತರದ ಪರ್ವತ ಎವರೆಸ್ಟ ಅಲ್ಲ ಎಂದು....!!!! ಹೌದು...ಸಮುದ್ರ ಮಟ್ಟದಿಂದ ಅಳೆದ ಅತ್ಯಂತ ಎತ್ತರದ ಪರ್ವತ ಎಂದರೆ ಅದು ಖಂಡಿತ ಮೌಂಟ್ ಎವರೆಸ್ಟ್ ಹೌದು...!! ಆದರೆ..!!!!! ಪರ್ವತದ ತಳದಿಂದ ಅದರ ತುದಿಯವರೆಗಿನ ಎತ್ತರವನ್ನು ಅಳೆದರೆ... ಎವರೆಸ್ಟ್ ಗಿಂತಲೂ ಸುಮಾರು ೩೦೦೦ ಅಡಿಗಳಷ್ಟು ಹೆಚ್ಚು ಎತ್ತರದ ಪರ್ವತವೊಂದಿದೆ...!!! ಆದೇ.. ಹವಾಯಿ ದ್ವೀಪಗಳ ಸಮೂಹದ ಸಮುದ್ರದಲ್ಲಿ ಕಂಡುಬರುವ ‘ಮೌನಾ ಕಿಯಾ‘ ಎಂಬ ಪರ್ವತ...!!!! ತಳದಿಂದ ಇದರ ಎತ್ತರವನ್ನು ೩೩,೪೬೫ ಅಡಿ ಎಂದು ದಾಖಲಿಸಲಾಗಿದೆ, ಅಂದರೆ ಇದರ ಎತ್ತರ ಎನರೆಸ್ಟ್ ಗಿಂತ ೪,೪೩೬ ಅಡಿ ಅಧಿಕ. ಆದರೆ ಈ ಪರ್ವತದ ೧೩,೭೯೬ ಅಡಿ ಭಾಗ ಮಾತ್ರ ಸಮುದ್ರದಿಂದ ಹೊರಚಾಚಿದೆ.



Thursday, April 9, 2009

ಜೊತೆ-ಜೊತೆ


ಜೊತೆ-ಜೊತೆ

ಮನಸು ಮುದುಡಿದೆ
ಮನವ ಕಲಕಿದೆ
ಮನಮೆಚ್ಚಿದವ
ಮನಚುಚ್ಚಿದರೆ

ಗೆಣೆಯರ ಮಧ್ಯೆ
ಗೇಣೂ ಇಲ್ಲದ್ದು,
ಒಮ್ಮೆಗೇ ಹೀಗಾಯಿತೇಕೆ?
ಗೋಣು ಮುರಿದಂತೆ
ಗೋಳಾಡಿಸಿದ್ದು

ಎಲ್ಲದಕು ಅವನು
ಸಲ್ಲುವನು ಬಿಡನು
ಮೆಲ್ಲಮೆಲ್ಲಗೆ ಏಕೆ
ನಿಲ್ಲುವನು ದೂರ?

ಕಣ್ಣಂಚಿನ ಮಿಂಚನು
ಬೆಂಚಂಚಿನ ಸಂಚನು
ಇಂಚಿಂಚು ಅರಿತವನು
ಸಂಚಿಗೇಕೆ ಬಲಿಯಾದನು?

ಅವನ ಬಾಲ್ಯ ಜೊತೆ-ಜೊತೆ
ಕೌಮಾರ್ಯ ಜೊತೆ-ಜೊತೆ
ಶಾಲೆಯುದ್ದಕ್ಕೂ ಜೊತೆ
ಕಾಲೇಜಿನ ಕೀಟಲೆಗೂ ಜೊತೆ
ಬಾಳ ಬವಣೆಯಲೂ ಜೊತೆ
ಅಪಾರ್ಥವ ಅರ್ಥೈಸಿ ಸರಿಮಾಡಿ
ಮತ್ತೆ ಆಗಿ ಬಿಟ್ಟೆವು ಜೊತೆ-ಜೊತೆ

Friday, April 3, 2009

(ಅ)ರಾಜಕಾರಣಿ

ರಾಜಕಾರಣಿ.. ರಾಜಕಾರಣಿ ಓಟು ಬೇಕೆ..?
ಓಟು ಕೊಂಡು ನಮ್ಮ-ನಮ್ಮೊಳಗೇ ತಂದಿಡಬೇಕೆ..?

ರಾಜಕಾರಣಿ ಓಟು ಕೊಂಡು ಏನು ಮಾಡುವೆ ?
ಕುರ್ಚಿಗಂಟಿ ರಕ್ತಹೀರಿ ಸ್ವಿಸ್ಸುಬ್ಯಾಂಕಿನಲ್ಲಿ ಕೋಟಿಮಾಡುವೆ

ರಾಜಕಾರಣಿ ಕುರ್ಚಿ ಸಿಗದೆ ಹೋದರೆ ಏನು ಮಾಡುವೆ..?
ಅನ್ನವಿಟ್ಟ ತಟ್ಟೆಯಲ್ಲಿ holeಉ ಮಾಡುವೆ

ರಾಜಕಾರಣಿ ನಿನ್ನನೆಚ್ಚಿ ಓಟುಕೊಟ್ಟರೆ
ಬಡವ ತನ್ನ ಒಳಿತಿಗಾಗಿ ಧಣಿಯ ನೆಚ್ಚಿಕುಂತರೆ
ರೈತ ತನ್ನ ಸಾಲ ಹೊರೆಯ ಹೊತ್ತು ಕುಂತರೆ
ಸ್ಕೂಲು ಮಕ್ಕಳೆಲ್ಲ ಓದಲು ಕತ್ತಲು ಕಳೆವುದೆಂದುಕೊಂಡರೆ
ಹೆಮ್ಮಕ್ಕಳು ತಮಗೂ ಮೀಸಲಾತಿ ಅರಸಿ ನೆಡೆದಿರೆ
ಹೇಳು ಎಲ್ಲರಾಸೆ ನೆರವೇರಲು ಏನು ಮಾಡುವೆ..?

ನನ್ನ ಮಗ, ಅಳಿಯ, ಹೆಂಡ್ತಿಗಾಗಿ ಒಂದೊಂದು ಛೇರು
ಸ್ವಿಸ್ಸ್ ನಲ್ಲಿ ಜಮಾವಣೆ, ಬಂಗ್ಲೆ ಬಂಡಿ ಜಮೀನು ಚೂರು
ನಮ್ಮವರೆಲ್ಲರ ಹೆಸರಲ್ಲೊಂದು ನೂರೋ ಇನ್ನೂರೋ ಶೇರು
ಆದಮೇಲೆ...ನನ್ನವರಿಗೆ ನೌಕರಿ, ನನ್ನ ಜಾತಿಯವರ ಚಾಕರಿ
ಅಧಿಕಾರಿಗಳಿಗೆ ಬಢೋತರಿ, ಪುಢಾರಿಗಳಿಗೆ ಛೋಕರಿ...
ಹೀಗೆಲ್ಲ ಪಟ್ಟಿರುವೆ ಈ ಐದು ವರ್ಷದಲ್ಲಿ ಎಷ್ಟೊಂದು ಬವಣೆ
ಓಟುಕೊಟ್ಟವನ ನೆನಪಾಗುವುದರಲ್ಲಿ ಬಂದೇ ಬಿಡ್ತು ಚುನಾವಣೆ

ಅದಕ್ಕೆ ಈಗ ಬಂದಿರುವೆ ನಿಮ್ಮೆಲ್ಲರ ಮುಂದೆ
ಬಾಕಿ ಇರುವ ಕೆಲಸವನ್ನು ಪೂರೈಸೋಣವೆಂದೇ
ಅಮ್ಮ, ಅಪ್ಪ, ಅಕ್ಕ ಆಣ್ಣಗಳಿರಾ ಕೊಡಿ ನಿಮ್ಮ ಅಮೂಲ್ಯ ಓಟು
ಈ ಬಾರಿ ಪೂರೈಸುವೆ ಆಶ್ವಾಸನೆ, ತರುವೆ ನಿಮ್ಮ ಮನೆಗೆ ಲೈಟು.

ಆಶ್ವಾಸನೆಗಳ ಶ್ವಾನವಿದು,
ನಾಯಿಹೆಸರಿಗೆ ಅಪಚಾರವಿದು,
ಅದು ಅನ್ನ ತಿಂದು ಮನೆಕಾಯ್ವದು
ಇದು ತಿಂದ ಮನೆಗೇ ಕನ್ನ ಕೊರೆವುದು.



Thursday, March 12, 2009

ಹೀಗೂ ಒಂದು ಪ್ರೇಮ-ಕಥೆ

ಹೀಗೂ ಒಂದು ಪ್ರೇಮ-ಕಥೆ
ಬಂದು ನಿಂದವಳು ಮನದಲ್ಲಿ
ಅಂದು ಕೊಂದವಳು ಕಣ್ಣಲ್ಲಿ
ಹುಬ್ಬ ಬಿಲ್ಲಿನೆದೆಗೆ
ನೋಟ, ಬಾಣವು ಗುರಿಗೆ
ಕಾಡಿ ಆಡಿಸಿ ನಾಟಿತ್ತು
ಮನದ ಬೇಗೆಯ ಕದಡಿತ್ತು
ಮಂದಸ್ಮಿತೆ..ಆಳ ಕುಳಿಗೆನ್ನೆ
ಕೆಂದುಟಿ ಮನೋಹರಿ ಮನದನ್ನೆ
ಕಣ್ಣು-ಕಣ್ಣು ಹಲವೊಮ್ಮೆ ಕೂಡಿದ್ದವು
ತುಟಿಬಿಚ್ಚದೇ ಮಾತನಾಡಿದ್ದವು
ನಾವಾಗಲಿಲ್ಲ ರೋಮಿಯೋ-ಜೂಲಿಯಟ್ಟು
ಆಗಲಿಲ್ಲ ಲೈಲಾ-ಮಜನೂ, ತಲೆಕೆಟ್ಟು
ಕಳೆದಿವೆ ವಸಂತಗಳು ಮುವತ್ತು
ನಡೆದಿದೆ ನಂನಮ್ಮ ಸಂಸಾರದ ಕಸರತ್ತು
ಈಗಲೂ ಯಾವಾಗಲಾದರೂ ಅಪರೂಪಕ್ಕೆ
ಅವಳ-ನಾನು, ನನ್ನ-ಅವಳು ಕಂಡರೆ
ತನ್ನಷ್ಟಕ್ಕೆ ಮೂಡುವುದು ಕಣ್ಣುಗಳಲಿ
ಕಾತುರತೆ-ಹೊಳಪು
ನಿಷ್ಕಲ್ಮಷ ಮನಗಳಲಿ
ಕಾಣುವುದು ಹೊಸ ಹುರುಪು
ತಿಳಿದಿತ್ತು ಅಂದೂ -ಇದು ನನಸಾಗದ ಕನಸೆಂದು
ಕನಸಕಾಣಲು ಯಾವ ಕಟ್ಟುಪಾಡುಗಳೂ ಇಲ್ಲವೆಂದು
ಮುದನೀಡುವ ನೆನಪುಗಳು, ಕನಸಕಾಣುವ ಮನಸುಗಳು
ಆಗ ಬೇಕಿಲ್ಲ ಎಲ್ಲರ ಕಾಡುವ ವ್ಯಥೆಗಳು
ನಮಗೆ ತಿಳಿದಿದೆ ..ನಿಮಗೂ ತಿಳಿದಿರಲಿ
ಹೀಗೂ ಹುಟ್ಟಬಹುದು ಪ್ರೇಮ ಕಥೆಗಳು.

Thursday, March 5, 2009

ಬಿಟಿಎಸ್-ಬಸ್ಸಿನಲ್ಲೊಮ್ಮೆ

ಬಿ.ಟಿ.ಎಸ್. ಬಸ್ಸಿನಲ್ಲಿ
ಬಹಳ ವರ್ಷಗಳ ನಂತರ ಬಿ.ಟ್.ಎಸ್ ನಲ್ಲಿ ಪ್ರಯಾಣ ಮಾಡೋ ಅವಕಾಶ ಅಂದೊ ಕೂಡಿಬಂದಿತ್ತು. ಹಾಗೇ..ಈ ವರೆಗೆ ನನ್ನ ಸ್ನೇಹಿತರು ಹೇಳಿತ್ತಿದ್ದುದು ಅಕ್ಷರಶಃ ಸತ್ಯ ಅನ್ನೋದನ್ನು ತಿಳಿಯೋ ಅವಕಾಶ ಸಹಾ ಸಿಕ್ಕಿತ್ತು.
ಹತ್ತು ವರ್ಷಗಳಿಂದ ದೇಶದ ಪೂರ್ವೋತ್ತರ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ಈಗ ಒಂದು ವಾರದ ಹಿಂದೆ ಮದ್ರಾಸಿಗೆ ವರ್ಗವಾಗಿತ್ತು. ಆ ದಿವಸ ನನ್ನ ಸ್ಕೂಟರ್ ನನ್ನ ಗೆಳೆಯನೊಬ್ಬ ಕೆಲಸನಿಮಿತ್ತ ತೆಗೆದುಕೊಂಡು ಹೋಗಿದ್ದ, ಹಾಗಾಗಿ ಬಿ.ಟಿ.ಎಸ್ ನಲ್ಲಿ ಪ್ರಯಾಣಿಸುವ ಸದವಕಾಶ. ಸರಿ ಮೆಜೆಸ್ಟಿಕ್ಕಿಗೆ ಬಸ್ ಹತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಬಂದಾಗ ಕಂಡಕ್ಟರಿಗೆ "ಮೆಜೆಸ್ಟಿಕ್" ಅಂತ ಹೇಳಿ ಹತ್ತರ ನೋಟು ಕೊಟ್ಟೆ. ಚಿಲ್ಲರೆ ಜೊತೆ ಟಿಕೆಟ್ ಕೊಟ್ಟರು ಕಂಡಕ್ಟರ್. ನನ್ನ ಮುಂದೆ ನಿಂತಿದ್ದ ಸಹ ಪ್ರಯಾಣಿಕನಿಗೆ ಕೇಳಿದೆ.."ಹಲೋ ಸರ್..ಈ ಬಸ್ಸು ಮಾರ್ಕೆಟ್ ಮಾರ್ಗ ಹೋಗುತ್ತಾ?"...ಆತ ಪಿಳಿ ಪಿಳಿ ಕಣ್ಣು ಬಿಟ್ಟ..ಬಹುಶಃ ಸರಿಯಾಗಿ ಕೇಳ್ಸಿರಲಿಕ್ಕಿಲ್ಲ ಅಂತ ಮತ್ತೆ ಕೇಳಿದೆ, ಮತ್ತದೇ ನಿರ್ಲಿಪ್ತ ಭಾವ...ಮತ್ತೆ..ಇಂಗ್ಲೀಷಿನಲ್ಲಿ ಕೇಳಿದೆ...ತಕ್ಷಣ.."ಯಾ..ಯಾ..ದಿಸ್ ಗೋಸ್ ವಯ ಮಾರ್ಕೆಟ್ ..ಬಟ್ ಯು ನೋ..ಐ ಡೋನ್ಟ್ ನೋ ಕನ್ನಡ" ಎಂದ..ನನಗೆ ಸ್ವಲ್ಪ ರೇಗಿತು..ಅಲ್ಲ ಇಂಗ್ಲೀಷಿನಲ್ಲಿ ಉತ್ತರ ಕೊಟ್ಟ..ಸರಿ..ಆದರೆ ನನಗೆ ಕನ್ನಡ ಬರೋದಿಲ್ಲ ಅಂತ..ರಾಜಾ ರೋಷವಾಗಿ ಅದೇ ಒಂದು qualification ಅನ್ನೋ ತರಹ ಹೇಳ್ತಿದ್ದಾನಲ್ಲ ಅಂತ. "ಮತ್ತೇನು ನೀವು ಇಂಗ್ಲೀಷಿನವರೇ...??" ಕೇಳಿದೆ..."pardon me..??" ನಾನು ಕೇಳಿದ ರೀತಿ ಮತ್ತು ನನ್ನ ಧಾಟಿಯಿಂದ ಅವನಿಗೆ ಅರ್ಥವಾದ್ರೂ ಆಗದವನಂತೆ..ಏನು ಹೇಳಿದ್ರಿ..? ಅನ್ನೋ ತರಹ ಕೇಳಿದ...ನನಗೂ ನನ್ನ ವರ್ತನೆ ಸರಿಯಿಲ್ಲ ಎನ್ನಿಸಿ.."I mean are you from north India..?" ಎಂದೆ. "ನೋ ಐಯಾಮ ಫ್ರಂ ಆಂಧ್ರ" ಎಂದ. "ಓ ಹಾಗೋ...ಎಷ್ಟು ವರ್ಷ ಆಯ್ತು ನೀವು ಬೆಂಗಳೂರಿಗೆ ಬಂದು..?" ಎಂದೆ. ಮತ್ತೆ ಪಿಳಿ..ಪಿಳಿ..ನಾನು ಮತ್ತೆ.."how long you are in Bangalore..?" ಅಂತ ಇಂಗ್ಲಾಂತರಿಸಿದೆ...ಅದಕ್ಕೆ ಆ ಮಹಾಶಯ.." last six years" ಎಂದ. "ಮತ್ತೆ ಅಲ್ಪ ಸ್ವಲ್ಪ ಕನ್ನಡ ಕಲಿತಿರಬೇಕಲ್ವಾ..?"..ಅವ ನನ್ನ ಮುಖ ನೋಡ್ದಾಗ ನನ್ನ ತಪ್ಪಿನ ಅರಿವಾಗಿ.."by now you must have learnt a little bit of Kannada.." ಎಂದೆ. " no..I dont feel it is necessary..every one here speaks English or Hindi" ಎಂದ. "ಎಲಾ ಇವನ..!! ಕನ್ನಡ ನಾಡಿನಲ್ಲಿ ಕನ್ನಡ ಕಲಿಯೋ ಅವಶ್ಯಕತೆ ಇಲ್ಲ ಅಂತ ಎಷ್ಟು ಧೀಟಾಗಿ ಹೇಳ್ತಾ ಇದ್ದಾನೆ..?"...ಎನ್ನಿಸಿ ನಾನು ಇನ್ನೇನೋ ಕೇಳೋ ಮೊದಲೇ..ಅವನ ಪಕ್ಕದಲ್ಲಿದ್ದಾತ (ಅವನ ಸ್ನೇಹಿತ ಅಂತ ಕಾಣುತ್ತೆ) .."ಇತನಿಕೇಮಂಟ ಮನಮು ಕನ್ನಡಂಲೋ ಮಾಟಲಾಡಲೇದನಿ ಕೋಪಮಾ..?"..ಅಂದ...ನನಗೆ ಪಿತ್ತ ನೆತ್ತಿಗೇರಿತ್ತು..."ಕಾದಂಡಿ..ಕರ್ನಾಟಕಮುಲೋ ವಾಸಿಂಚಿ..ಇಕ್ಕಡ ಉದ್ಯೋಗಂ ಚೇಸೇ ಮೀಕು..ಕನ್ನಡಂ ನೇರ್ಚುಕೋವಾಲಿ ಅನಿ ಅನಿಪಿಂಚಲೇದ..?" (ಆಲ್ರೀ..ಕರ್ನಾಟಕದಲ್ಲಿ ವಾಸಿಸಿ ಇಲ್ಲಿ ಉದ್ಯೋಗದಲ್ಲಿರೋ ನಿಮಗೆ ಕನ್ನಡ ಕಲಿಯಬೇಕು ಎನಿಸಿಲ್ಲವೇ..?) ಎಂದೆ. ನನ್ನ ತೆಲಗನ್ನು ಕೇಳಿ ಆತ ದಂಗಾದ ಅಂತ ಕಾಣುತ್ತೆ.." ಮೀಕು ಇಂತ ಬಾಗಾ ತೆಲುಗು ವಸ್ತುಂದೇ,,?? (ನಿಮಗೆ ಇಷ್ಟು ಚನ್ನಾಗಿ ತೆಲುಗು ಬರುತ್ತದಲ್ಲಾ)" ಅಂತ ಹುಬ್ಬೇರಿಸಿದ. ನಾನು ಕನ್ನಡದಲ್ಲೇ "ನಿಮ್ಮ ವಿಜಯವಾಡ ದಲ್ಲಿ ಕೆಲಸದ ಮೇಲೆ ಆರು ತಿಂಗಳು ಇರಬೇಕಾದಾಗ ಕಲಿತಿದ್ದೆ" ಎಂದೆ. ಅವನಿಗೆ ಆಶ್ಚರ್ಯ ವೆಂಬತೆ ಈ ಗ ನಾನು ಹೇಳಿದ್ದು ಅರ್ಥವಾಗಿತ್ತು. ನಮ್ಮ ಮಾತು ಆಲಿಸುತ್ತಿದ್ದ ಇನ್ನೊಬ್ಬ ಹಿರಿಯ ವಯಸ್ಸಿನವರು.."ಅದೇ ಸಾರ್ ನಾವು ಕನ್ನಡಿಗರು ಮಾಡೋ ತಪ್ಪು...ನಾವು ಬೇರೆಡೆ ಹೋದಾಗ ಅಲ್ಲಿನವರ ಜೊತೆ ವ್ಯವಹರಿಸಬೇಕಲ್ಲಾ ಅಂತ ಅವರ ಭಾಷೇನ ಕಲೀತೀವಿ..ಅದೇ ನಮ್ಮ ನಾಡಗೆ ಬರುವ ಬೇರೆ ಭಾಷಿಗರಿಗೆ ಆ ಭಾವನೆ ಬರುವಂತೆ ಮಾಡುವುದರಲ್ಲಿ ವಿಫಲರಾಗುತ್ತೇವೆ...ಈಗ ನಿಮ್ಮನ್ನೇ ತೆಗೆದುಕೊಳ್ಳಿ ...ಆತನಿಗೆ ಬರಲಿಲ್ಲ ಅಂತ ತೆಲಗಲ್ಲಿ ಸಂಭಾಷಿಸಿದಿರಿ...ಇವರಿಗೆ ಕನ್ನಡದ ಅವಶ್ಯಕತೆ ಎಲ್ಲಿ ಬರಬೇಕು ಹೇಳಿ ?..ಹೀಗೇನೇ ನಾವು ಪಂಚಭಾಷಿಗಳಾಗುತ್ತೇವೆ...ಬಹುತೇಕ ಕನ್ನಡಿಗರಿಗೆ ಹೊರಗಿನವನ ಜೊತೆ ಆಗಂತುಕ ಭಾಷೆಯಲ್ಲಿ ಮಾತನಾಡಿಸಿದರೆ ಆತ ಖುಷಿಪಡುತ್ತಾನೆ ಅಂತ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ, ಕನ್ನಡಿಗರೆಲ್ಲಾ ಹೀಗೇನೇ ಎಂದುಕೊಳ್ಳುವ ಹೊರಗಿನವರೂ ಇಲ್ಲಿಗೆ ಬರುವುದಕ್ಕೆ, ನೆಲಸುವುದಕ್ಕೆ, ವ್ಯವಹರಿಸುವುದಕ್ಕೆ ಹಿಂಜರಿಕೆಯಿರುವುದಿಲ್ಲ ಇದು ಒಂದು ರೀತಿ ಅಂತ್ಯ-ಹೀನ ವರ್ತುಲವಾಗುತ್ತೆ ..ಆ ವರ್ತುಲದಲ್ಲಿ ಕಳೆದು ಹೋಗುವುದು ಕನ್ನಡ...!!! ಇಂತಹ ವಾತಾವರಣದಲ್ಲಿ ಇಲ್ಲದಂತಾಗುವುದು ಕನ್ನಡಿಗರು...!! ಈ ದಿನ ಬೆಂಗಳೂರಿನಲ್ಲಿ ಕನ್ನಡಿಗರು ಶೇ. ೫೦-೬೦ ಮಾತ್ರ, ಅದರಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಶೇ. ೪೦-೫೦ ಮಾತ್ರ. ಯಾತಕ್ಕೆ ಹೇಳಿ..? ನಿಮ್ಮಂತಹ ಕನ್ನಡಿಗರೂ ವ್ಯವಹಾರದಲ್ಲಿ, ತಮ್ಮ ಮುಂದಿರುವವನಿಗೆ ಅನುಕೂಲವಾಗಲಿ ಅಂತ ಇತರ ಭಾಷೆನೇ ಬಳಸೋದರಿಂದ.. ಹಾಗಂತ ನಾವು ಕೆಲವು ಇತರ ಭಾಷಿಗರ ತರಹ ದುರಭಿಮಾನಿಗಳಗಬೇಕು ಎನ್ನುತ್ತಿಲ್ಲ.. ಆದರೆ ನಮ್ಮ ಭಾಷೆಯನ್ನು ಇತರರ ಮನಸೊಪ್ಪುವ ರೀತಿ ಅವರಿಗೆ ತೊಂದರೆಯಾಗದಂತೆ ಬೆಳೆಸುವುದರಲ್ಲಿ ತಪ್ಪೇನಿದೆ..? ನಾವು ಇತರ ದೇಶಕ್ಕೆ ಹೋದರೆ ಅಲ್ಲಿ ಅವರ ಭಾಷೆಯ ಪ್ರಾಥಮಿಕ ಹಂತದ ಪರಿಣಿತಿಯನ್ನು ಹೊಂದಬೇಕಂತೆ...ಇಲ್ಲಿ ..ಕಡೇ ಪಕ್ಷ ಕನ್ನಡದಲ್ಲಿ ಸಂಭಾಷಿಸಿದರೆ ಏನು ತಪ್ಪು..? ನಮ್ಮಲ್ಲೇ ಹುಳುಕಿದ್ದು..ಸರ್ಕಾರ..ಮತ್ತು ಇತರ ಭಾಷಿಗರನ್ನು ದೂರುವುದು ನಮಗೆ ಸಲ್ಲದು. ಕನ್ನಡಿಗರು ತಮ್ಮ ತಮ್ಮಲ್ಲಿಯೇ ಕನ್ನಡದಲ್ಲಿ ಮಾತನಾಡಿಕೊಳ್ಳುವರೇ..ಎಂದು ನನಗೆ ಸಂಶಯವಾಗುತ್ತದೆ..ಇನ್ನು ಬೇರೆಯವರನ್ನು ದೂರುವುದು ಸರಿಯಲ್ಲ.." ಹಿರಿಯರ ಈ ಸುದಿರ್ಘ ವಿಮಶರ್ಷೆ ಹಲವರಿಗೆ ಹಿಡಿಸಿತು..ಚಪ್ಪಾಳೆ ಸದ್ದು ಕೇಳಿ..ಅರೆರೆ..ಅಂದರೆ ಸುಮಾರು ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತೆ...ಮತ್ತೆ...ನಾನು ನನ್ನ ಸಹ ಪ್ರಯಾಣಿಕನೊಡನೆ ಮಾತನಾಡುವಾಗ ಇವರೆಲ್ಲ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಲ್ಲಾ..? ಅರ್ಥವಾಗಲಿಲ್ಲ!!!..ಏಕೆ ಕನ್ನಡಿಗರಿಗೆ ಈ ಕೀಳರಿಮೆ...ಎಂದು ಇವರಲ್ಲಿ ಭಾಷಾಭಿಮಾನ ಜಾಗೃತಗೊಳ್ಳುವುದು? ಕೆಲವೊಮ್ಮೆ ಪರಸ್ಪರ ಕನ್ನಡದವರೇ ಎಂದು ಗೊತ್ತಿದ್ದರೂ..ಬೇರೆಯವರ ಎದುರಲ್ಲಿ..ಮೂರನೇ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಕನ್ನಡಿಗರ ಈ ಕೀಳರಿಮೆ ಅಥವಾ ಸಂಕೋಚವೇ ಕಾರಣ ಎನ್ನಿಸುತ್ತದೆ. ನಮ್ಮನಮ್ಮಲ್ಲಿ ಹೆಮ್ಮೆಯಿಂದ ಕನ್ನಡದಲ್ಲಿ ವ್ಯವಹರಿಸುವ ಮೊದಲ ಪಾಠವನ್ನು ಕನ್ನಡಿಗರು ಮನನ ಮಾಡಿಕೊಳ್ಳಬೇಕು, ಇತರರೊಡನೆ ಮೊದಲಿಗೆ ಕನ್ನಡದಲ್ಲಿ ವ್ಯವಹರಿಸಿ, ಯಾರಿಗೆ ಗೊತ್ತು ಮುಂದಿರುವವರಿಗೆ ಕನ್ನಡ ಬರಬಹುದೇನೋ?..ಎಲ್ಲರೂ ಇದನ್ನು ಪರಿಪಾಲಿಸಿದರೆ ಬಹುಶಃ ಬೇರೆಭಾಷಿಗರು ಕನ್ನಡ ಕಲಿಯಲು ಮುಂದಾಗಬಹುದು..ಭಾಷೆ ಬೆಳೆಯುವುದು ಹೀಗೆ..

Wednesday, March 4, 2009

ಕವನಗಳು

ನನ್ನ ಕನಸಿನ ನಾಡು
ಮೋಹನ ಮುರುಳಿ ಸಮ್ಮೋಹಿಸಿತು ಗೋವುಗಳ..
ಅವುಗಳಿಗೆ ನಾದವೇ ಭಾಷೆ, ನಾವೇಕೆ ಹೀಗೆ?
ಮಾಮರದ ವಸಂತ ಋತುವಿಗೆ
ಕೋಗಿಲೆಯ ಕುಹೂ ಕುಹೂವೇ ಭಾಷೆ,
ನಾವೇಕೆ ಹೀಗೆ?
ಹೂಬನದ ಕುಸುಮ
ಸುಗಂಧವೇಗುಂಯ್ ಗುಡುವ ಭ್ರಮರಕ್ಕೆ ಬಾಷೆ,
ನಾವೇಕೆ ಹೀಗೆ?
ಗೊತ್ತಿದ್ದೂ ಎಲ್ಲ ಕನ್ನಡಿಗರೆಂದೇ
ನಾಡು ನುಡಿ - ಪರಭಾಷೆಯ
ಪರನಾಡ ಗಡಿಯೊಳಗೆ..ನಮ್ಮವರೊಂದಿಗೇ
ಪರಭಾಷೆಯ-ಕುಶಲೋಪರಿ......
ಕೀಳರಿಮೆ..ಕಳಂಕವೆಂಬ ಹುಸಿಬಿಂಕವೋ?
ತೋರಿಕೆಯ ಏಳುಬೀಳುವ..ಹುಂಬತನವೋ?
ಪರನಾಡೇಕೆ?..
ನಮ್ಮ ಕೆಂಪೇಗೌಡರಬೆಂದಕಾಳೂರಲಿ..
ಕಾಲ್ಮುರಿದು..ಕುಂಟುವಂತೆ ಮಾಡಿದ
ನಮ್ಮ ಭಾಷಾ ಕಾಳಜಿಯ ಕಂಡು
ಕೇಳುತ್ತಿಲ್ಲವೇ ಕನ್ನಡಮ್ಮ
ನನ್ನ ಕಂದಮ್ಮಗಳೇ....
ನೀವೇಕೆ ಹೀಗೆ?


ನೀರು-ಮೂರು

ಜಲ-ನಿಧಿ
ಮೋಡ ನೋಡ..
ನೋಡುತ್ತಿದ್ದಂತೆ ಆಗಸದಿ
ಕಾಣದಂತಿದ್ದುದು ಕಂಡು
ಬಿಳಿಹೊಗೆಯಾದದ್ದು,
ಬಿಳಿ ತೆಳು ಸೀರೆ ಯುಟ್ಟದ್ದು
ಹತ್ತಿಯ ಮೆತ್ತೆಯೊಳಗೆ
ಸೂರ್ಯಕಿರಣದೊಡನೆ
ಕಣ್ಣಾ ಮುಚ್ಚಾಲೆಯಾಡಿದ್ದು
ಕ್ರಮೇಣ ಮಣ್ಣಮೆತ್ತಿದಂತಾದದ್ದು
ನಡು ಕಂದು, ಕಡು ಕಪ್ಪು ತಿರುಗಿದ್ದು
ಗಾಳಿಯೊಡನೆ ಬೆರೆತದ್ದು
ದಿಗಂತಕೆ ಓಕುಳಿಯೆರಚಿದ್ದು
ಕರಗಿದ್ದು, ಕರಗಿ ಹನಿಯಾದದ್ದು
ಎಲ್ಲೋ ಆಸೆ ಹುಟ್ಟಿಸಿ
ಮತ್ತೆಲ್ಲೋ ಹನಿಸಿ ಮಳೆಗರೆದದ್ದು
ಒಂದೆಡೆ ಅತಿ, ಮತ್ತೊಂದೆಡೆ ಮಿತಿ
ಮಗದೊಂದೆಡೆ ಮರೀಚಿಕೆ ಯಾದದ್ದು
ಅಲ್ಲಿ ಜೋಗ, ಇನ್ನೆಲ್ಲಿಯೋ ರೋಗ
ಆಗಿ ಗಂಗೆ, ತುಂಗೆ ಜಲೋಗಮ ಸ್ಥಾನ
ಕೆಲವೆಡೆ ನೀರೇ ಕಾಣದ ರಾಜಾಸ್ಥಾನ
ಕುಡಿಯಲು, ಬೆಳೆಯಲು,
ಮಲಿನ ತೊಳೆಯಲು - ಮಾಡಿದ್ದು ವಿಧಿ
ಕೆಲವರಿಗಿದು ಜಲ ಮತ್ತನೇಕರಿಗಿದು ನಿಧಿ