(ಚಿತ್ರ ಕೃಪೆ: ನೆನಪಿನ ಸಾಲು ಬ್ಲಾಗೊಡೆಯ ಪ್ರವೀಣ್)
ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಗದ್ದಿ ತಾಕ್ಕೆ
ಮನ್ಯಾಗ್ ಇದ್ಬಿಡು
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?
ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಒಲೀತಾಕ್ಕೆ
ಇದ್ದು ಬಿಡ್ ದೇವ್ರ ಮನ್ಯಾಗ್
ಜಪ ದ್ಯಾನ ಮಾಡ್ಕಂಡ್
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?
ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ನೀ ಹೊಳೀ ದಂಡ್ಯಾಕ್ಕೆ
ಬಟ್ಟೆ ಬರೆ ಒಗೀಬ್ಯಾಡ
ನಡ ಇಡ್ಕ್ಂಡೀತು ಮುಪ್ನಾಗೆ
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?
ಅವ್ವವ್ವ ಎಲ್ಲಾಕ್ಕೂ ಹೂಂ
ಆದ್ರೆ ನಿನ್ನುತ್ತರ..!!!
ಏಳ್ಬಿಡು ಅಮ್ಮಯ್ಯಂಗೆ
ತೆಗ್ದಿಡು ನನ್ ತಾಟ್ ನಾನ್ ಸತ್ಮ್ಯಾಕ್ಕೆ
ಯಾಕಂದ್ರೆ..ಈಟ್ ಮಾತ್ರಾನೂ
ಆಕಾಣಿಲ್ಲ ಪುಟ್ನೆಂಡ್ತಿ
ಮುದ್ದೆ-ಸಾರು ನಿನ್ತಾಟ್ಗೆ...?