Tuesday, October 13, 2015

ದೇಹ - ದೇಶ


ಮಾನವ ದೇಹ ಒಂದು ಅದ್ಭುತ ಮತ್ತು ಅತಿ ಹೆಚ್ಚು ಕ್ಲಿಷ್ಟ ಸಂವಹನ, ಸಂಚಲನ ಮತ್ತು ಕ್ರಿಯಾಶೀಲತೆಗಳ ಆಗರ. ಒಂದೊಂದು ಅಂಗವೂ ಒಂದೊಂದು ಅಗಾಧ ಜ್ಞಾನದ ಗ್ರಂಥಮಾಲಿಕೆ. ಎಲ್ಲವೂ ಉದ್ಭವವಾಗುವುದು ಒಂದೇ ಒಂದು ಕೋಶಮಿಲನ ಕ್ರಿಯೆಯಿಂದ. ಅರ್ಧ ಒಂದೆಡೆಯದಾದರೆ ಇನ್ನರ್ಧ ಮತ್ತೊಂದೆಡೆಯದು. ಆ ಅರ್ಧಗಳೋ ಪೂರ್ಣಸಾಕಾರದಲ್ಲಿ ಎಷ್ಟೊಂದು ವಿಭಿನ್ನ!!? ಒಂದು ಇನ್ನೊಂದರ ಪೂರಕ, ಮಾರಕ, ಪೀಡಕ, ಕ್ಲೇಶಕ, ಹರ್ಷಕ, ಏನೆಲ್ಲಾ ಆಗಬಹುದೋ ಆಗುವಂತಹವು. ಆ ಕೋಶಗಳು ಸೇರುವ ಕ್ರಿಯೆಯೂ ಅಲ್ಲಿ ನಡೆಯುವ ಪ್ರಕ್ರಿಯೆಗಳ ಹಿನ್ನೆಲೆ ಮತ್ತು ಪರಿಣಾಮಗಳೂ ಸಿದ್ಧವಾಗುವ ಜೀವಿಯ ಎಲ್ಲಾ ಗುಣಗಳಿಗೆ ನಾಂದಿ ಹಾಡುವಂತಹವು. ಅರ್ಧ ಭಾಗದ ಜೀವವಾಹಿನಿಗಳು ಇನ್ನರ್ಧದ ಜೀವವಾಹಿನಿಗಳ ಜೊತೆಗೂಡಿ ಸಂಕೇತ ಗ್ರಂಥವನ್ನು ರಚಿಸುತ್ತವೆ. ಆ ರಚೆನೆಯೋ ಬೆಳೆದ ದೇಹಕ್ಕೆ ಅರ್ಥವಾಗದ ಭಾಷೆಯಲ್ಲಿರುತ್ತವೆ. ಆಶ್ಚರ್ಯವೆಂದರೆ ಅರ್ಥವಾಗದ ಸಂಕೇತಗಳೇ ಭಾಷೆಯನ್ನೂ ಕಲಿಸುತ್ತವೆ. ಭಾಷೆಯನ್ನು ಕಲಿತ ಪಂಡಿತ ಪೋಷಕಗಳು ರಕ್ತವೃದ್ಧಿ, ಕೋಶವೃದ್ಧಿ, ಅಂಗಬೆಳವಣಿಗೆ, ಬುದ್ಧಿ, ಯೋಚನೆ, ಕ್ರಿಯಾಶೀಲತೆ, ಎಲ್ಲವನ್ನೂ ಕೊಡುವಂತೆ ರೋಗ ರುಜಿನಗಳನ್ನು ತರುವುದು ಹೇಗೆಂದೂ, ಅವನ್ನು ಹೋಗಲಾಡಿಸುವ ಬಗೆ ಏನೆಂದೂ ತನಗೇ ತಿಳಿಯದ ಭಾಷೆಯನ್ನು ತನ್ನಲ್ಲಿ ತರಲು ಯತ್ನಿಸಿದರೆ ತಾನು ಹೇಗೆ ದೇಹ ನಿಘಂಟಿಗೆ ಸಿಗದ ಭಾಷೆಯಾಗುತ್ತೇನೆಂದೂ ಸಂಕೇತಗಳಲ್ಲೇ ಹೇಳುತ್ತವೆ. ಈ ಸಂಕೇತಗಳ ಕ್ರಿಯೆ, ಅತಿಕ್ರಿಯೆ ಅಥವಾ ತಟಸ್ಥತೆಗಳ ಆಧಾರದ ಮೇಲೆಯೇ ದೇಹಸ್ಥಿತಿ ಅವಲಂಬಿಸಿರುತ್ತದೆ. ಇವೆಲ್ಲದರ ಜೊತೆಗೆ ಈ ಸಂಕೇತಗಳು ಸ್ವನಿಯಂತ್ರಣೆಯನ್ನೂ ಮಾಡಬಲ್ಲವು.
ಈ ಎಲ್ಲಾ ಕ್ರಿಯೆಗಳಿಗೂ ನಂಟು ತರುವುದು ಬಾಹ್ಯ ಮಾಧ್ಯಮ - ಗಾಳಿ, ಭೂಮಿ, ನೀರು. ಈ ಅಂಶಗಳಲ್ಲೂ ಜೀವ ಸಂಕೇತಗಳ ಮೂಲ ಘಟಕಗಳು ಇರುವುದರಿಂದ ಈ ಮಾಧ್ಯಮದ ಬದಲಾವಣೆಗಳು ಜೀವವಾಹಿನಿಗಳ ಸಂಕೇತಗಳನ್ನೇ ಆಚೀಚೆ ಮಾಡುವ ಗುಣಹೊಂದಿರುತ್ತವೆ. ಒಂದು ಹಂತದವರೆಗೆ ಈ ಮಾಧ್ಯಮಗಳ ಪ್ರಭಾವವನ್ನು ಇಲ್ಲವಾಗಿಸುವ ಅಥವಾ ನಿಷ್ಕ್ರಿಯಗೊಳಿಸುವ ಅಂತಃಶಕ್ತಿ ಈ ಸಂಕೇತ ಮತ್ತು ಪಂಡಿತ ಪೋಷಕಗಳಿಗಿದ್ದರೂ ಮಿತಿ ಮೀರಿದಾಗ ಹಾನಿ ಮೂಲಕ್ಕೇ ಆಗುವುದಂತೂ ಖಂಡಿತ. ಸಾಮಾನ್ಯವಾಗಿ ಬಾಹ್ಯ ಮಾಧ್ಯಮದ ಮೂಲ ಘಟಕಗಳು ಸಂತುಲಿತ ಪ್ರಮಾಣ ಮತ್ತು ಕ್ರಿಯಾಗತಿಗಳಲ್ಲಿದ್ದರೂ ಅಗೋಚರ ಮತ್ತು ಅಸಾಮಾನ್ಯ ಶಕ್ತಿಯೊಂದು ಅಗಾಧ ಏರು ಪೇರಿಗೆ ಕಾರಣವಾಗಬಹುದು. ಆಗ ಎಲ್ಲಾ ಸೃಷ್ಟಿಯ ಎಲ್ಲಾ ಘಟಕಗಳೂ ಪ್ರಭಾವಕ್ಕೊಳಗಾಗುವುದು ಖಂಡಿತ ಮತ್ತು ಹಾಗಾಗಿದೆ ಕೂಡಾ.
ಒಂದಕ್ಕೊಂದು ಹೀಗೆ ಅಗಣಿತ ಮತ್ತು ಅನೂಹ್ಯ ರೀತಿಯ ಸಂಬಂಧಗಳನ್ನು ಹೊಂದಿರುವ ನಾವು ಕಾಣುವ ಲೋಕದಲ್ಲಿ ದೇಹದ ಸ್ಥಿತಿ ಮತ್ತು ದೇಶದ ಸ್ಥಿತಿ ಒಂದೇ ರೀತಿಯವು. ದೇಹದ ಅಂಗಗಳು ಒಂದಕ್ಕೊಂದು ಸಹಕಾರ ಮತ್ತು ಸಹಾಯ ನೀಡದಿದ್ದರೆ ಆಯಾ ಅಂಗ ಮಾತ್ರವಲ್ಲ ಇಡೀ ದೇಹವೇ ಪ್ರಭಾವಿತವಾಗುತ್ತದೆ. ಸಮಾಜದ ಘಟಕಗಳ ಬಾಧ್ಯತೆಗಳೂ ಹೀಗೆಯೇ. ಜವಾಬ್ದಾರಿ ಅರಿತು ನಡೆಯುವ ಪ್ರತಿಕೋಶದ ಬಾಧ್ಯತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಂಗದ ಸಮಯಾಸಮಯ ಕ್ರಿಯಾಶೀಲತೆ ಹಾಗೆಯೇ ಪ್ರತಿಯೊಬ್ಬ ಪ್ರಜೆಯೂ ದೇಶದ ಹಿತ ಮತ್ತು ಆರೋಗ್ಯದ ದೃಷ್ಟಿಯಿಂದ ಹೊರ ಪ್ರಭಾವಗೊಳಗಾಗದೇ ತನ್ನತನ ಕಾಪಾಡಿಕೊಳ್ಳಬೇಕು, ಹಾಗೆಯೇ ವರ್ತಿಸಬೇಕು. ತನ್ನ ಮೂಲ ಸಂಕೇತಗಳನ್ನು ಬಾಹ್ಯ ಪ್ರಭಾವಗಳಿಗೆ ಒಡ್ಡಿ ಪ್ರಭಾವಿತಗೊಳಿಸಬಾರದು, ಬಾಹ್ಯಘಟಕಗಳ ಪ್ರಭಾವವನ್ನು ಆಗ ದೇಶ ಸಮರ್ಥವಾಗಿ ಎದುರಿಸಬಲ್ಲದು. ತನ್ನಲ್ಲೇ ಸಂಕೇತಗಳ, ಸಂದೇಶಗಳ ಕೋಶಗಳ ಮತ್ತು ಅಂಗಗಳ ತಿಕ್ಕಾಟವಾದರೆ ದೇಹ ಧೃತಿಗೆಡುವುದು ಹೇಗೆ ಸ್ವಾಭಾವಿಕವೋ ಹಾಗೆಯೇ ದೇಶದ ಘಟಕಗಳಾದ ಪ್ರಜೆ, ಸಮಾಜ, ಧರ್ಮ, ಸಂಘಟನೆ, ರಾಜ್ಯ (ಸಂಕೇತಗಳ ಕ್ರಮಬದ್ಧ ಕಟ್ಟುಪಾಡಿನ ಪರಿಧಿಯ ಅಂಗರಚನೆ) ಎಲ್ಲವೂ ತಮ್ಮ ತಮ್ಮ ಜವಾಬ್ದಾರಿಯರಿತು ನಡೆದುಕೊಳ್ಳಬೇಕಾಗುತ್ತದೆ.