Saturday, April 11, 2009

ಗೆಳೆಯರೇ ಸಮುದ್ರಗಳ ಬಗ್ಗೆ ಮಾಹಿತಿ ಕೊಡಬೇಕೆಂಬ ಯೋಚನೆಯಿಂದ ಈ ಶೃಂಖಲೆಯನ್ನು ಪ್ರಾರಂಭಿಸುತ್ತಿದ್ದೇನೆ. ಮೊದಲ ಕಂತಿನಲ್ಲಿ ಸಮುದ್ರಗಳ ಬಗ್ಗೆ ಕ್ಲುಪ್ತ ಮಾಹಿತಿ ಮತ್ತು ಕ್ರಮೇಣ ವಿವರಗಳನ್ನು ನೀಡಬೇಕೆಂಬುದೇ ನನ್ನ ಆಶಯ.








ನಮ್ಮ ಸಾಗರ-ಸಮುದ್ರ ಸಂಪತ್ತು -1

ಭೂಮಂಡಲದ ಶೇ ೭೦ ಭಾಗ ಸಮುದ್ರಗಳಿಂದ ಕೂಡಿದೆ. ಈ ಅಗಾಧ ಜಲರಾಶಿಯೇ ಸಕಲ ಜೀವೋದ್ಭವಕ್ಕೆ ದಾರಿಯಾಯಿತೆಂದರೆ ಜಲ ಮತ್ತು ಜೀವಗಳ ಮಧ್ಯೆ ಇರುವ ಅಪೂರ್ವ ಸಂಬಂಧ ಎಷ್ಟೊಂದು ಗಾಢವಾದುದು ಎಂದು ತಿಳಿಯುತ್ತದೆ. ಎಲ್ಲ ಸಮುದ್ರಗಳೂ ಉಪ್ಪುನೀರಿನಿಂದ ಕೂಡಿದ್ದು, ಭೂಭಾಗದ ಲವಣಾಂಶಗಳ ಕರಗುವಿಕೆಯಿಂದ ನದಿಗಳಿಂದ ಹರಿದುಬಂದು ಸಮುದ್ರ ಸೇರಿದ ನದಿನೀರು ಉಪ್ಪಾಗಲು ಕಾರಣವಾಗುತ್ತದೆ. ಸಮುದ್ರದ ನೀರಿನಲ್ಲಿ ಸರಾಸರಿ ೩.೫ ರಿಂದ ೪.೦ ಶೇ. ಉಪ್ಪಿನಂಶ ಇರುತ್ತದೆ. ಕೆಲ ಸಮುದ್ರಗಳಲ್ಲಿ (ನದಿಗಳ ಅಗಾಧತೆ, ಮಂಜುಕರಗುವಿಕೆ ಮತ್ತು ಅಧಿಕ ಮಳೆ ಈ ಎಲ್ಲಾ ಕಾರಣಗಳಿಂದ) ಉಪ್ಪಿನಂಶ ಕಡಿಮೆಯಿರುತ್ತದೆ. ‘ಮೃತ‘ ಅಥವಾ ‘ಸತ್ತ ಸಮುದ್ರ‘ (Dead Sea) ಎಂದೇ ಹೆಸರಾಗಿರುವ ಸಮುದ್ರದ ಉಪ್ಪಿನಂಶ ಅತ್ಯಧಿಕವಾಗಿದ್ದು ಇಲ್ಲಿ ಜೀವರಾಶಿ ಬಹಳ ವಿರಳ. ಈ ಸಮುದ್ರದ ನೀರಿನಲ್ಲಿರುವ ಉಪ್ಪಿನಂಶ ಎಷ್ಟಿರಬಹುದೆಂದು ಯೋಚಿಸಿ..!! ಪ್ರತಿ ಲೀಟರ್ ನೀರಿನಿಂದ ೩೩೦ ಗ್ರಾಂ ಉಪ್ಪನ್ನು ಪಡೆಯಬಹುದೆಂದರೆ...ಅಲ್ಲಿ ಯಾವ ಜೀವ ಉಳಿಯಲು ಸಾಧ್ಯ ಯೋಚಿಸಿ..??.!!! ಈ ಸಮುದ್ರ ಸಮುದ್ರ ಮಟ್ಟದಿಂದ ಸುಮಾರು ೪೨೦ ಮೀಟರ್ ಕೆಳಗಡೆ ಇದ್ದು, ವಾರ್ಷಿಕ ಮಳೆಪ್ರಮಾಣ ೫೦ (ದಕ್ಷಿಣ ಭಾಗ) ರಿಂದ ೧೦೦ ಮಿ.ಮೀ. ಆಗಿರುತ್ತದೆಂದು ದಾಖಲೆ ಹೇಳುತ್ತದೆ








ಸಾಗರಗಳನ್ನು ಮುಖ್ಯವಾಗಿ ಶಾಂತ (Pacific) ಸಾಗರ, ಅಟ್ಲಾಂಟಿಕ್ (Atlantic) ಸಾಗರ, ಹಿಂದೂ ಮಹಾ ಸಾಗರ, ಧೃವ ಸಾಗರ (ಉತ್ತರ ಮತ್ತು ದಕ್ಷಿಣ ಧೃವ) ಗಳೆಂದು ಹೆಸರಿಸಲಾಗಿದೆ. ಭೂಭಾಗದ ಮೂರನೇ ಒಂದು ಭಾಗ ಆವರಿಸಿರುವ ಶಾಂತ ಸಾಗರ ಅತ್ಯಂತ ವಿಶಾಲ ಸಾಗರ. ಭೂ ಮಂಡಲದ ಅತ್ಯಂತ ಆಳದ ಕಂದರ ಈ ಸಾಗರದಲ್ಲೇ ಕಂಡುಬರುತ್ತದೆ. ಇದನ್ನು Challenger's Deep (ಛಾಲೇಂಜರ್ ಕಂದರ) ಅಥವಾ Mariana Trench (ಮೆರಿಯಾನಾ ಕಂದರ) ಎನ್ನುತ್ತಾರೆ. ಈ ಕಂದರದ ಆಳ ಎಷ್ಟೆಂದರೆ...ಅತಿ ಎತ್ತರದ ಶಿಖರವಾದ ಎವೆರೆಸ್ಟನ್ನು ಸುಲಭವಾಗಿ ಸಮುದ್ರದಲ್ಲಿ ಮುಳುಗಿಸಬಹುದು...!!!! ಅಂದರೆ ಈ ಆಳ ಸುಮಾರು ೧೦ ೯೧೧ ಮೀಟರ್ ಅಥವಾ ೩೫,೭೯೭ ಅಡಿ ಎಂದು ಅಂದಾಜಿಸಲಾಗಿದೆ (ಇದರ ನಿಖರ ಆಳ ತಿಳಿಯಲಾಗಿಲ್ಲ..!!! ಇದು ಇನ್ನೂ ಆಳವಿರಬಹುದು..!!!)








ಇನ್ನು ಸಮುದ್ರದಲ್ಲಿ ಪರ್ವತಗಳಿವೆಯೇ..?? ಹೌದು..!! ಕೆಲವಂತೂ ಸಮುದ್ರ ತಳದಿಂದ ಮೇಲೆದ್ದು ಸಮುದ್ರಮಟ್ಟವನ್ನೂ ಮೀರಿ ಸಮುದ್ರದಮೇಲೆ ಕಂಡುಬಂದಿವೆ. ಭೂಭಾಗದ ಅತ್ಯಂತ ಎತ್ತರದ ಪ್ರದೇಶ ಹಿಮಾಲಯ ಪರ್ವತಗಳು ಎಂದೂ, ಎವರೆಸ್ಟ್ ಪರ್ವತ ವಿಶ್ವದ ಅತ್ಯುನ್ನತ ಪರ್ವತವೆಂದೂ ಬಹುಶಃ ಪ್ರಾಥಮಿಕ ಪಠ್ಯ ಪುಸ್ತಕಗಳ ಮೂಲಕ ತಿಳಿಸಲಾಗಿದೆ. ಇಲ್ಲಿ ಕುತೂಹಲಕರ ಅಂಶವೊಂದನ್ನು ತಿಳಿಸಲಿಚ್ಛಿಸುತ್ತೇನೆ.!! ಏನು ಗೊತ್ತೇ..?? ಅತ್ಯಂತ ಎತ್ತರದ ಪರ್ವತ ಎವರೆಸ್ಟ ಅಲ್ಲ ಎಂದು....!!!! ಹೌದು...ಸಮುದ್ರ ಮಟ್ಟದಿಂದ ಅಳೆದ ಅತ್ಯಂತ ಎತ್ತರದ ಪರ್ವತ ಎಂದರೆ ಅದು ಖಂಡಿತ ಮೌಂಟ್ ಎವರೆಸ್ಟ್ ಹೌದು...!! ಆದರೆ..!!!!! ಪರ್ವತದ ತಳದಿಂದ ಅದರ ತುದಿಯವರೆಗಿನ ಎತ್ತರವನ್ನು ಅಳೆದರೆ... ಎವರೆಸ್ಟ್ ಗಿಂತಲೂ ಸುಮಾರು ೩೦೦೦ ಅಡಿಗಳಷ್ಟು ಹೆಚ್ಚು ಎತ್ತರದ ಪರ್ವತವೊಂದಿದೆ...!!! ಆದೇ.. ಹವಾಯಿ ದ್ವೀಪಗಳ ಸಮೂಹದ ಸಮುದ್ರದಲ್ಲಿ ಕಂಡುಬರುವ ‘ಮೌನಾ ಕಿಯಾ‘ ಎಂಬ ಪರ್ವತ...!!!! ತಳದಿಂದ ಇದರ ಎತ್ತರವನ್ನು ೩೩,೪೬೫ ಅಡಿ ಎಂದು ದಾಖಲಿಸಲಾಗಿದೆ, ಅಂದರೆ ಇದರ ಎತ್ತರ ಎನರೆಸ್ಟ್ ಗಿಂತ ೪,೪೩೬ ಅಡಿ ಅಧಿಕ. ಆದರೆ ಈ ಪರ್ವತದ ೧೩,೭೯೬ ಅಡಿ ಭಾಗ ಮಾತ್ರ ಸಮುದ್ರದಿಂದ ಹೊರಚಾಚಿದೆ.



1 comment:

  1. sir olleya mahiti...foto's kooda chennagide..
    munduvarisi..
    vandanegalu
    manasu..

    ReplyDelete