Saturday, March 9, 2013

ಪುರುಷ ದಿನಾಚರಣೆ


ಪುರುಷ ದಿನಾಚರಣೆ

ಮಹಿಳಾ ಮಣಿಗಳೇ, ಪುರುಷ ಹಕ್ಕು ಬಾಧ್ಯತೆಗಳ ಸಂರಕ್ಷಣಾ ದಿನವಾದ ಇಂದು - ಮಹಿಳೆಯರೆಲ್ಲಾ ಒಂದು ಗೂಡಿ ಅಬಲರಾದ, ಸಮಾಜದ ಹೀಗಳೆಯುವಿಕೆಗೆ ತುತ್ತಾಗಿರುವ ಪುರುಷರ ಹಿತಕೋರಿ ಅವರ ಹಕ್ಕು ಬಾಧ್ಯತೆಗಳ ಸಂರಕ್ಷಣೆಗೆ ನಮ್ಮ ತನು ಮನ ಧನಗಳಿಂದ ಸಹಕಾರ ಪ್ರೋತ್ಸಾಹ ನೀಡುವ ಘೋಷಣೆಗಳ ಪುನರುಚ್ಛಾರದ ದಿನ. ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಈ ದಿನವನ್ನು ಮಹಿಳೆಯರಿಂದ ಪೀಡಿತ, ಶೋಷಿತ ಪುರುಷರ, ಉಡುಗುತ್ತಿರುವ ದನಿಯನ್ನು ಸಶಕ್ತಗೊಳಿಸಲು ೧೯೭೧ ರಲ್ಲಿ ಮಾರ್ಚ್ ೧೦ ನ್ನು ವಿಶ್ವ ಪುರುಷ ದಿನವೆಂದು ಘೋಷಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. “ಪುರುಷಂ ನ ಸ್ವಾತಂತ್ರ್ಯಂ ಅರ್ಹತಿ” ಎನ್ನುವ ನಮ್ಮ ವೇದಗಳ ಘೋಷಣೆಗಳನ್ನು ಪುನಃ ಪರಿಶೀಲಿಸುವ ಕೆಲಸ ಪುರುಷ ಹಿತಕೋರುವ ಮಹಿಳಾಮಣಿಗಳಾದ ನಾವು ಮಾಡಬೇಕಿದೆ. ಈ ದಿನದ ಸಮಾರಂಭಲ್ಲಿ ಕೆಲವು ವಿಶೇಷ ಸಾಧಕ ಪುರುಷರನ್ನು ಸತ್ಕರಿಸುವ ಕಾರ್ಯಕ್ರಮದ ಜೊತೆಗೆ ಅಪೂರ್ವ ಸಾಹಸ ತೋರಿ ಒಬ್ಬ ಅಮಾಯಕ ಸಾಫ್ಟ್ ವೇರ್ ಅಭಿಯಂತರನನ್ನು ರಕ್ಷಿಸಿ ಪುಂಡ ಹುಡುಗಿಯರಿಂದ ಪಾರುಮಾಡಿಸಿ ಅವನ ಮಾನ-ಪ್ರಾಣ ಕಾಪಾಡಿದ ಶ್ರೀ ವೀರಪ್ಪ ಅವರನ್ನು ಸನ್ಮಾನಿಸುವ ದಿನ. ಈ ದಿನದ ಮುಖ್ಯ ಅತಿಥಿಗಳಾಗಿ ಮಹಿಳಾ ಅತಿರೇಕಗಳ ಹೋರಾಟಕ್ಕೇ ತನ್ನ ಜೀವನವನ್ನು ಮುಡುಪಾಗಿಟ್ಟಿರುವ ಡಾ. ಶೀಲವಂತ್ ರವರು ಆಗಮಿಸಿದ್ದಾರೆ. ಮಹಿಳೆಯರೇ ತುಂಬಿರುವ ಇವರ ಕಾರ್ಯಕ್ಷೇತ್ರವಾದ ಆರೋಗ್ಯ ಲಾಖೆಯಲ್ಲಿ ಏಕೈಕ ವೀರಾಗ್ರಣಿಯಂತೆ ತಮ್ಮ ಮತ್ತು ಗಂಡು ಜಾತಿಯ ಮೇಲಿನ ಅತ್ಯಾಚಾರಗಳನ್ನು ತಡೆವ ಹೋರಾಟಗಾರನಾಗಿ ಇವರು ಹೆಸರು ಮಾಡಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು ಮಾನ್ಯೆ ಆರೋಗ್ಯ ಸಚಿವೆಯಾದ ಶ್ರೀಮತಿ ಡಾ. ಶತಪುರುಷ ಕಲ್ಯಾಣಿ ದೇವಿ ವಹಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಅರ್ಹರಾದ ಧೀರ ಪುರುಷರು, ವಿಶೇಷ ಸನ್ಮಾನಕ್ಕೆ ಹಕ್ಕುದಾರರಾದ ಶ್ರೀ ವೀರಪ್ಪ ಉಪಸ್ಥಿತರಿದ್ದಾರೆ. ಈ ಎಲ್ಲರಿಗೂ ಆದರದ ಸುಸ್ವಾಗತ. ಈಗ ವಿಶೇಷ ಸನ್ಮಾನಿತ ಶ್ರೀ ವೀರಪ್ಪ ನಮ್ಮನ್ನುದ್ದೇಶಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕೆಂದು ಕೋರುತ್ತೇನೆ.
ಮಾನ್ಯೆ ಅಧ್ಯಕ್ಷಿಣಿ ದೇವಿಯವರೇ, ಪುರುಷರೆಲ್ಲಾ ಹೆಮ್ಮೆ ಪಡುವ ಸಾಧನೆಯ ಕೆಲಸದಲ್ಲಿ ತೊಡಗಿಸಿಕೊಂಡ ಪುರುಷರ ಮೇಲಿನ ಸ್ತ್ರೀ ಅತ್ಯಾಚಾರವನ್ನು ತಡೆಯುವ ಪಣತೊಟ್ಟ ಡಾ. ಶೀಲವಂತ್ ರವರೇ ನನ್ನ ಶೋಷಿತ ಪುರುಷ ಬಾಂಧವರೆ, ಸ್ತ್ರೀ ಸ್ನೇಹಿತೆಯರೇ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಧು ಮತ್ತು ಪ್ರಾಮಾಣಿಕ ಸಾಫ್ಟ್ ವೇರ್ ಅಭಿಯಂತರನೊಬ್ಬ ಕೆಲಸಕ್ಕೆ ತೆರಳುವಾಗ ಕಾರಿನಲ್ಲಿ ಹಟಾತ್ತನೆ ಎರಗಿದ ಪುಂಡಾಟದ ಹುಡುಗಿಯರ ಗುಂಪೊಂದು ಆತನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅಸ್ತ್ರೀಯ ವಿಧದದಲ್ಲಿ ಮಾನಹರಣದ ಪ್ರಯತ್ನ ಮಾಡಿದ್ದಾರೆ. ಆತನ ಬಟ್ಟೆ ಬಿಚ್ಚಿ ವಿಧ ವಿಧ ಚಿತ್ರಹಿಂಸೆ ಕೊಟ್ಟಿದ್ದರು. ಪುರುಷ ಹಾಸ್ಟಲ್ ನಲ್ಲಿ ಕಾವಲಿನಲ್ಲಿದ್ದ ನಾನು ಆಗಷ್ಟೇ ಹತ್ತಿರದ ನಮ್ಮ ಕ್ವಾರ್ಟರ್ಸ್ನ ಗೆ ಹೋಗಿದ್ದೆ. ಪೋಲೀಸ್ ಉನ್ನತ ಅಧಿಕಾರಿಣಿಯಾಗಿರುವ ನನ್ನ ಹೆಂಡತಿ ಕಮೀಶನರ್ ದಿಟ್ಟಮ್ಮನಿಗೆ ಊಟ ಬಡಿಸಿ ಮುಸುರೆ ಪಾತ್ರೆ ತೊಳೆದಿಡುವಾಗ ಯಾರೋ ಪೀಡಿತ ಪುರುಷನ ಚೀತ್ಕಾರ ಕೇಳಿದಂತಾಗಿ ಯಾವುದಕ್ಕೂ ಇರಲಿ ಎಂದು ಖಾರದ ಪುಡಿ ಡಬ್ಬಿಯನ್ನು ಪ್ಯಾಂಟ್ ಜೋಬಿಗೆ ಹಾಕಿಕೊಂಡೆ. ಹತ್ತಿರದ ಮಾವಿನ ತೋಪಿನಿಂದ ಕೂಗಾಟ ಕೇಳಿಬರುತ್ತಿತ್ತು. ಅನಾಹುತವಾಗುವುದಕ್ಕೆ ಮುಂಚೆ ಅಲ್ಲಿಗೆ ತಲುಪಿದ್ದೆ, ಪುಡಿಯನ್ನು ಎರಚಿ ಅಲ್ಲೇ ಬಿದ್ದಿದ್ದ ಮಾವಿನ ಮರದ ರೆಂಬೆಗಳಿಂದ ಹುಡುಗಿಯರೊಂದಿಗೆ ಹೋರಾಡಿ ಆ ಅಭಿಯಂತರನನ್ನು ರಕ್ಷಿಸಲುಪ್ರಯತ್ನಿಸಿದೆ. ನನ್ನ ಓವರ್ ಕೋಟನ್ನು ಅವನ ಮೈಮುಚ್ಚಲು ಕೊಟ್ಟೆ. ಊಟ ಬಡಿಸಿ ಕಾಣೆಯಾದ ನನ್ನನ್ನು ಹುಡಿಕಿಕೊಂಡು ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದ ನನ್ನ ಕಮೀಶನರ್ ಹೆಂಡತಿ ಆ ಪುಂಡ ಅತ್ಯಾಚಾರಿ ಹುಡುಗಿಯರನ್ನು ಹಿಡಿಯುವಲ್ಲಿ ಸಹಕರಿಸಿದಳು. ಈ ದಿನ ಮಹಿಳಾ ಸಂಘಟನೆಗಳು ನನ್ನನ್ನು ಸನ್ಮಾನಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ......”
“ಅಪ್ಪಾ...ಅಪ್ಪಾ.... ಆಫೀಸಿಗೆ ಟೈಂ ಆಗ್ತಿದೆ..ಹೋಗಲ್ವಾ...?? ಅಮ್ಮ ಅಡುಗೆ ಮನೆಯಿಂದ ಐದಾರು ಸಲ ಎಬ್ಬಿಸು ನಿನ್ನ ಅಪ್ಪನ್ನ ಅಂತ ಹೇಳಿದ್ಲು....ಅಪ್ಪಾ...ssss
ಕಣ್ಣುಜ್ಜುತ್ತಾ ಎದ್ದ ನನಗೆ.... ಮಹಿಳಾದಿನದ ಕಾರ್ಯಕ್ರಮ ನೋಡಿಬಂದು.. ಅಕಸ್ಮಾತ್ ದೇವರು ಗಂಡಿನ ಶಕ್ತಿ ಹೆಣ್ಣಿಗೆ, ಹೆಣ್ಣಿನ ಶಕ್ತಿ ಗಂಡಿಗೆ ಅದಲು ಬದಲು ಮಾಡಿದ್ರೆ..??? ಹೇಗೆ???? ಎಂದು ಯೋಚಿಸಿ ಮಲಗಿದ್ದರ ಪರಿಣಾಮವಾಗಿ ಇಲ್ಲಿವರೆಗೆ ಕಂಡದ್ದು ಕನಸು ಎಂದು ತಿಳಿಯುವುದಕ್ಕೆ ತಡವಾಗಲಿಲ್ಲ.