(ಚಿತ್ರ: ಮನುವಚನ್ ನ ಛಾಯಾಗ್ರಹಣ ಕೌಶಲ್ಯ)
ಇದರಿಂದ ಹುಟ್ಟಿದ ಹಸಿರುಳಿಸೆನುವ ಕಾಳಜಿಯ ಕವನ
ಎಲೆಮೇಲೆಳೆಹನಿ
ಎಲೆಯಮೇಲೆಳೆಹನಿ...
ಮಳೆಕರಗಿ ಹನಿಸಿತೇ?
ಇಲ್ಲಾ ಎಲೆಬೆವರಿತೇ..?
ಉಸಿರ್ಕಟ್ಟಿ ಪ್ರದೂಷಣೆಗೆ
ಬೇರ-ಬೇರ್ಕೊಂಡ ಬವಣೆಗೆ
ಕಾಂಡಕೆ ಬಿದ್ದ ಕೊಡಲಿಗೆ..??
ಇಲ್ಲಾ.. ಪಾರ್ಕನೂ ನುಂಗುವ
ಹಸಿರ್ಹಾಸುಗೆಗೂ ಲಗ್ಗೆ
ಎಗ್ಗು-ನೆಗ್ಗಿಲ್ಲದ ಭೂಕಬಳಿಕೆಗೆ..
ಭೂಗರ್ಭವನೂ ಬಗೆವವಗೆ
ಹೆದರಿ ಚಿಗುರೆಯಾಗಿ
ಚಿಗುರೊಡೆಯದಾಗುವ
ಮತ್ತೆಲೆ ಬಾರದೋ ಎನುವ
ಭಯಕೆ..ನಭಕೆ ತಲೆಯೆತ್ತಿ
ಬೇಡುತಾ ಅಳುತಿದೆಯೇ..??
ಕಣ್ಣ ಹನಿಸುವ ಹನಿಯ
ಕನಿಕರಿಸೆನುವ ದನಿಯೇ..??
ಹಸಿರಳಿದರೆ ಉಸಿರುಳಿಯದು
ಬೇಡ ಭಯ ಎಲೆ ಎಲೆಯೇ
ನೀನು, ಮನುಕುಲಕಿರುವ
ಅಳಿವುಳಿವಿನ ಏಕೈಕ ಸೆಲೆಯೇ.