ಹಕ್ಕಿ ಮತ್ತು ಗೂಡು
ಬಾರಕ್ಕಾ ಬಾರೇ ಕತ್ತಲಾಯ್ತು ಸೇರೋಣ ಹಾರಿ ಗೂಡು
ಹೊರಟಾಯ್ತು ಇತ್ತ ರವಿತೇಜ ಕೆಂಪಾಗಿಸಿ ಬಾನ ನೋಡು
ಹಗಲೆಲ್ಲ ಹಾರಿ ಹೂವ ಹಣ್ಣ ಹೆಕ್ಕಿ ಬಾಯಲೊಂದು ಕಾಳು
ಮುಗಿಲೆಲ್ಲಾ ತೂರಿ ಬಣ್ಣ ತಿಕ್ಕಿ ಸೂರ್ಯನಿಗೂ ಬೇಕು ಕೂಳು
ಗೂಡಲಿಹವು ರೆಕ್ಕೆಯಿರದ ಕಣ್ಣು ಬಿಡದ ಕೆಂಪು ಕೊಕ್ಕ ಕೂಸು
ಕಾಯುತಿಹವು ಗುಡುಗ, ಹಾವು ಬೇಟೆಗಾಗಿ ಬಲೆಯ ಬೀಸು
ಅಪ್ಪ ಅಮ್ಮ ಹೋಗಿಬರಲು ಎಂದಿನಂತೆ ಋತುಚಕ್ರ ವಲಸೆ
ಕಲಿಯಲೆಂದು ನಾನು ನೀನು ಹೋರಾಟ ಜೀವನದ ವರಸೆ
ಹುಟ್ಟು- ಭೂಮಿ ಜೀವ
ಭೂಮಿಯೊಂದು ಬೆಂಕಿ ಚಂಡು ನೊಂದು
ಸಿಡಿಯಿತಂತೆ ಸೂರ್ಯನಿಂದ ಅಂದು
ವೇಗ ಆವೇಗ ಭರ ನಿರ್ಭರ ತಂತು ಕಕ್ಷೆ
ಆಯ್ತು ಗ್ರಹ ತನಗೊಂದು ಉಪಗ್ರಹ ನಕ್ಷೆ
ಅಣು, ಕಣ ಅನಿಲ ಕರಗಿ ಮೂರ್ಭಾಗ ಜಲ
ಗರ್ಭದಿ ಲಾವ ಗಣಿಸಿರಿ ಮೇಲೆ ಜೀವಸಂಕುಲ
ಹುಟ್ಟಿದ್ದು ಮೊದಲು ಅಣುತುಂಬಿ ಏಕಕೋಶಿ
ರವಿ ತೇಜ ತಿಂದು ಅನಿಲ ಕುಡಿದು ಸಸ್ಯರಾಶಿ
ಬಹುಕೋಶಿ, ಜೀವಿಹೊಂದಿ ಅಂಗಾಂಶ ಹಲವು
ಸೃಷ್ಠಿಯ ವಿಸ್ಮಯ ಜೀವ ವಿಕಸನ ಹಾದಿ ಜಲವು
ಒಂದೆಡೆ ಸಸ್ಯ ಮಗದೊಂದೆಡೆ ಪ್ರಾಣಿ ಸಹಜ
ಬಂದ ಮನುಜ- ಬೇಟೆ, ಹೊಲ ಕಾಳು ಕಣಜ
ಮಳೆ ಬೆಳೆ, ಕೈಗಾರಿಕೆ ಕ್ರಾಂತಿ, ತಂದು ಭ್ರಾಂತಿ
ಇಲ್ಲವಾಗುತಿದೆ ಪ್ರಕೃತಿ ಮನುಕುಲಕೆ ನಿತ್ಯ ಶಾಂತಿ