Friday, May 20, 2011

ಅವ್ವವ್ವ ನೀ ಬ್ಯಾಡವ್ವ

(ಚಿತ್ರ ಕೃಪೆ: ನೆನಪಿನ ಸಾಲು ಬ್ಲಾಗೊಡೆಯ ಪ್ರವೀಣ್)

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಗದ್ದಿ ತಾಕ್ಕೆ
ಮನ್ಯಾಗ್ ಇದ್ಬಿಡು
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಒಲೀತಾಕ್ಕೆ
ಇದ್ದು ಬಿಡ್ ದೇವ್ರ ಮನ್ಯಾಗ್
ಜಪ ದ್ಯಾನ ಮಾಡ್ಕಂಡ್
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ನೀ ಹೊಳೀ ದಂಡ್ಯಾಕ್ಕೆ
ಬಟ್ಟೆ ಬರೆ ಒಗೀಬ್ಯಾಡ
ನಡ ಇಡ್ಕ್ಂಡೀತು ಮುಪ್ನಾಗೆ
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ಎಲ್ಲಾಕ್ಕೂ ಹೂಂ
ಆದ್ರೆ ನಿನ್ನುತ್ತರ..!!!
ಏಳ್ಬಿಡು ಅಮ್ಮಯ್ಯಂಗೆ
ತೆಗ್ದಿಡು ನನ್ ತಾಟ್ ನಾನ್ ಸತ್ಮ್ಯಾಕ್ಕೆ
ಯಾಕಂದ್ರೆ..ಈಟ್ ಮಾತ್ರಾನೂ
ಆಕಾಣಿಲ್ಲ ಪುಟ್ನೆಂಡ್ತಿ
ಮುದ್ದೆ-ಸಾರು ನಿನ್ತಾಟ್ಗೆ...?

Wednesday, April 6, 2011

ಚಿತ್ರ ಕೃಪೆ: ಮಿತ್ರ ಪ್ರಕಾಶನ ಬ್ಲಾಗ್ (ಛಾಯಾ ಚಿತ್ತಾರ)

ಮೇಘವಾಗಲು ಸಾರ್ಥಕ ಇಳೆಗೆ

ಮೇಘಕೊಂದು ಆಗಲಿದೆ ಮೇಘದ ಸವಾಲು
ಕಪ್ಪು ಮೋಡ ಕೇಳಿತು ಬಿಳಿಮೋಡದ ಅಹವಾಲು
ನೀನು ತುಂಬಿಕೊಂಡು ಕಪ್ಪು ನಾನು ಬರಿದೇ
ಓಲಾಡುತಿರುವೆ ಹಗುರಾಗಿ ಒಂದೆಡೆ ನಿಲ್ಲದೇ

ನೀನಿಲ್ಲೋ ಅಲ್ಲೋ ಎಲ್ಲೋ ಒಂದೆಡೆ ಸುರಿವೆ
ನಾ ಹೀಗೇ ಗಾಳಿಹೋದೆಡೆ ನಿಲ್ಲದೇ ಅಲಿವೆ
ಹೇಳಿ ಬಿಡು ಬಿಟ್ಟು ಕೊಡು ಗುಟ್ಟನಿಂದು ನನಗೆ
ನಾನೂ ನಿನ್ನಂತೆ ಹೇಗಾಗಲಿ ಸಾರ್ಥಕ ಇಳೆಗೆ

ಮನದುಗುಡ ಬಿಚ್ಚಿ ಕಪ್ಪು ಹೇಳಿತು, ಬಿಳಿಯಾ
ಅಯ್ಯೋ ತುಂಬಿದೆ ಕಲ್ಮಶ ನನ್ನಲಿ ಗೆಳೆಯಾ
ಮನುಜ ಬಲು ಲಾಲಸಿ ಬಿಡಲಿಲ್ಲ ನನ್ನನೂ
ಬಿಳುಪಾಗಿರುವೆ ಹಾಗೇ ಇರು ಬಿಡವೊಲ್ಲ ನಿನ್ನನೂ

ನನಗೊಮ್ಮೆ ಹೋಗಬೇಕಿದೆ ನೆಲಕೆ ಕೆಳಗೆ
ಹನಿಯಾಗಿ ತುಂತುರಿಸಿ ಹನಿಸಿ ಅನ್ನಬೆಳೆಗೆ
ಕಪ್ಪಾದರೂ ಪರವಿಲ್ಲ ಹರಿದು ಸೇರಿ ಜಲಾಶಯ
ಬಿಸಿಗೆ ಧಗೆಗೆ ತಣಿಸಿ ಆವಿಯಾದರೂ ಇಲ್ಲ ಭಯ

ನಿಸರ್ಗ ನಿಯಮವಿದು ದಾಳಗಳು ನಾನು ನೀನು
ಹೂವೆಂದು ಮುಟ್ಟದೇ ಮಧುಹೀರದೇ ಜೇನು?
ಸೊಳ್ಳೆಯ ಕಪ್ಪೆ ಅದನು ಹಾವು ಮೇಲಿಲ್ಲವೇ ಹದ್ದು?
ಜೀವಿಗಳು, ಬಾಳುವುದು ನಿಯಮ ಅವಕಿಲ್ಲವೇ ಜಿದ್ದು?


Friday, March 4, 2011

उफ.यह तन्हाई

ಚಿತ್ರ: ಪ್ರಕಾಶ್ ಹೆಗ್ಗಡೆ

बेखरारी के लम्हे और सह न पाऊं यह तन्हाई
आह्ट का कर रहा दिल इंतजार बार बार
गर्म सांसॊं कॊ फिर से परखने का मन
मचल रहा दिल - पर, उफ. यह तन्हाई
 
वादे तो करते हैं, और दिल जलाने वाले
बातें तो करते हैं, और वादा न निभाने वाले
इंतजार और बेताबी हॊती क्या चीज है
भला वह क्या जाने, वादा करके भुलाने वाले

बेचैन हॊ उठी है झील भी तिल मिला कर
उठा रही है हलकी सी लहरॆं गेहराई पाकर
आ भी जा मेरे दिलबर और न सता यॊं
दर्द कॊ पहचान ने वाले बेदर्दि इस कदर क्यॊं?


Friday, January 28, 2011


Foto: Global Herald

ಕೃಷಿ-ಕೃಷಿಕ ಮತ್ತು ವ್ಯವಸ್ಥೆ


ನಾರಾಯಣ ರೆಡ್ಡಿಯವರ ಸಾವಯವ ಕೃಷಿ ಮತ್ತು ಅವರ ಕೃತಿ ಬಿಡುಗಡೆ ಸಂಬಂಧಪಟ್ಟ ಲೇಖನಗಳ ಬ್ಲಾಗ್ಗಳನ್ನು ನೋಡಿ ಪ್ರೇರಿತನಾಗಿ ಈ ಲೇಖನ ಬ್ಲಾಗಿಸುತ್ತಿದ್ದೇನೆ. ಸಾವಯವ ಕೃಷಿ ಅಥವಾ ಪೂರ್ಣ ರಾಸಾಯನಿಕಗಳ ಬಳಕೆ ಎರಡನ್ನೂ ನಮ್ಮ ಇಂದಿನ ವ್ಯವಸ್ಥೆ ಮತ್ತು ಕೃಷಿಭೂಮಿಯ ಸ್ಥಿತಿಗಳ ಹಿನ್ನೆಲೆಯಲ್ಲಿ ಸಮಗ್ರವೆನ್ನಲಾಗದು. ಒಂದೆಡೆ ಕಾಡು ನಾಶವಾಗುತ್ತಿದೆ.. ಕಾರಣ ಮಾನವನ ವಸತಿ ಮತ್ತಿತರ ಅವಶ್ಯಕತೆಗೆ..ಅತಿ ಆಸೆಗೆ..!! ತತ್ಪರಿಣಾಮ ಕ್ರಿಮಿ ಕೀಟಗಳಿಗೆ ಆಹಾರ ಆಶ್ರಯಗಳ ಕೊರತೆ..ಅವಕ್ಕೆ ಸುಲಭದ ತುತ್ತು ಬೆಳೆಗಳು..!! ಹಾಗಾಗಿ ಬೆಳೆ ರಕ್ಷಣೆಗೆ ರಾಸಾಯನಿಕಗಳ ಬಳಕೆ ಅನಿವಾರ್ಯವಾಗಿತ್ತು. ಹಸಿರುಕ್ರಾಂತಿಯ ಮೊದಲ ಧ್ಯೇಯವೇ ಬೆಳೆಯುತ್ತಿದ್ದ ಜನಸಂಖ್ಯೆಗೆ ಪರಿಪೂರ್ಣ ಮತ್ತು ಸಾಕಷ್ಟು ಆಹಾರದ ಪೂರೈಕೆಯಾಗಿತ್ತು, ಆಗ ಆಹಾರದ ಕೊರತೆಯಿದ್ದದ್ದು ಸತ್ಯ.. ೧೯೪೩ರ ಭಯಂಕರ ಬಂಗಾಲದ ಬರಗಾಲದ ಕಟು ಸತ್ಯ ನಮ್ಮ ಮುಂದಿದೆ. ಇಲ್ಲಿ ವಿಜ್ಞಾನದ ದೂಷಣೆಯೂ ಅನಗತ್ಯ ಎನಿಸುತ್ತೆ ಏಕೆಂದರೆ ವಿಜ್ಞಾನ ಆಯಾ ಕಾಲದ ಸಮಸ್ಯೆಗಳ ಅಧಾರದ ಮೇಲೆ ಪ್ರತಿಕ್ರಿಯಿಸುತ್ತದೆ, ಅದಕ್ಕೆ ದೂರಗಾಮಿ ದಿಶೆ ನೀಡಬೇಕಾದ್ದು, ಮತ್ತು ಸಮಗ್ರತೆಯನ್ನು ತರಬೇಕಾದ್ದು ನಮ್ಮ ಯೋಜನೆಗಳಲ್ಲಿ ಅಡಕವಾಗಬೇಕು. ಇನ್ನೊಂದು ನಗ್ನ ಸತ್ಯ ನಾವು ತಿಳಿಯಲೇಬೇಕು..ಎಲ್ಲಾ ರೈತರೂ ಸಾವಯವ ಕೃಷಿ ಮಾಡಿದರೆ ನಮ್ಮ ಆಹಾರೋತ್ಪಾದನೆ ಈಗಿರುವ ಮಟ್ಟವಿರಲಿ ಇದರಲ್ಲಿ ಅರ್ಧದಷ್ಟನ್ನೂ ಸಾಧಿಸಲಾಗದು. ಏಕೆಂದರೆ ಎಲ್ಲಾ ಭೂಮಿಯೂ ಸಾಯವಯ ಮಾತ್ರದಿಂದ ಆಹಾರ ಉತ್ಪಾದಿಸಲಾರದು. ಇಲ್ಲಿ ಗುಣ ವರ್ಧಕಗಳ ಪ್ರಯೋಗ ಅನಿವಾರ್ಯ. ಹಾಗೆಯೇ ಸ್ವಂತ ಸಾಮರ್ಥ್ಯ (ರೋಗರುಜಿನಗಳಿಗೆ ಕಾದಾಡಬಲ್ಲ ಗುಣ) ಎಲ್ಲ ಮಣ್ಣಿನಲ್ಲೂ (ಅದರಲ್ಲೂ ಹದಗೆಟ್ಟ ನಾಗರೀಕತೆಯ ಅವಶ್ಯಕತೆಗಳಿಗೆ ಓಗೊಡುತ) ಕಾಣುವುದಿಲ್ಲ..,, ಹೀಗಾಗಿ ಹಲವಾರು ಅನಿವಾರ್ಯಗಳು ನಮ್ಮನ್ನು ಸಾವಯವಕ್ಕೆ ಪೂರ್ಣಮಾನ್ಯತೆ ನೀಡುವಕ್ರಿಯೆಯಲ್ಲಿ  ತಡೆಯುತ್ತವೆ.

ಪ್ರಾಥಮಿಕ ಅವಶ್ಯಕತೆ ಬೆಳೆಯುತ್ತಿರುವ ಮಾನವ ಸಂತತಿಗೆ ಪೂರ್ಣ ಪ್ರಮಾಣದ ಆಹಾರದ ಪೂರೈಕೆ; ನಂತರ ಪೂರ್ಣ ಪೌಷ್ಠಿಕ ಅಹಾರದ ಪೂರೈಕೆ. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿಯನ್ನು ಎಲ್ಲೆಡೆ ಜಾರಿಗೆ ತರಲಾಗದು, ಹಾಗೊಮ್ಮೆ ತಂದರೂ ಆಹಾರದ ಗುಣಮಟ್ಟವಿರಲಿ ಎರಡು ಹೊತ್ತಿನ ಆಹಾರ ಪೂರೈಕೆ ಸಹಾ ಸಾಧ್ಯವಾಗದು. ಕಾರಣ ಸಾವಯವ ಕೃಷಿಯ ಇಳುವರಿ ನಮ್ಮ ಪ್ರಚಲಿತ ಪದ್ಧತಿಯ ಮಟ್ಟಕ್ಕಿಲ್ಲ ಎನ್ನುವುದು. ಎಲ್ಲಾ ಕೃಷಿಯೋಗ್ಯ ಜಮೀನು ಸಾವಯವ-ಸಮರ್ಥ ಕೃಷಿಗೆ ಯೋಗ್ಯ ಎಂದೂ ಹೇಳಲಾಗದು, ಹಾಗೊಮ್ಮೆ ಇದ್ದರೂ ಅದಕ್ಕೆ ಬೇಕಾಗುವ ಸಾವಯವ ಗೊಬ್ಬರಕ್ಕೆ ಬಹುಶಃ ಈಗಿರುವ ರಾಸುಗಳ ಸಂಖ್ಯೆಯನ್ನು ದ್ವಿಗುಣ, ತ್ರಿಗುಣಮಾಡಬೇಕಾಗುತ್ತದೆ, ಹಾಗೊಮ್ಮೆ ಮಾಡಿದರೂ ಅವಕ್ಕೆ ವಾಸಯೊಗ್ಯ ಕೊಟ್ಟಿಗೆಗೆ ಸ್ಥಳಾವಕಾಶ..??? ಅವುಗಳ ಅಹಾರವೂ ಸಾವಯವ ಅಥವಾ ಅರ್ಧ ಸಾವಯವ ಮೂಲದ್ದಾಗಬೇಕಾದರೂ..ಈಗಿರುವ ಮೇವಿನ ಪ್ರಮಾಣ ದ್ವಿಗುಣವಾದರೂ ಆಗಬೇಕು. ಅದಕ್ಕೆ ಬೇಕಾಗುವ ಮೇವುಬೆಳೆಗೆ ಮತ್ತೆ ಹೆಚ್ಚುವರು ಜಮೀನು, ಅದಕ್ಕೆಂದು ಅರಣ್ಯನಾಶ..ಇದರಿಂದ ಮಣ್ಣಿನ ಸವೆಕಲುಕ್ರಿಯೆ ಹೆಚ್ಚಾಗಿ ಫಲವತ್ತತೆ ನಾಶವಾಗುತ್ತದೆ. ಸಾವಯವ ಗೊಬ್ಬರ ಬಳಕೆ ಮತ್ತು ಕೀಟ ನಾಶಕ ವರ್ಜನೆಯಿಂದ ಆಹಾರೋತ್ಪಾದನೆ ಮಟ್ಟ ಕುಸಿಯುವುದು. ಈ ರೀತಿಯ ಎಲ್ಲಾ ಸಮಸ್ಯೆಗಳು ಎದುರಾಗುತ್ತವೆ.

ಇನ್ನು ಕೃಷಿ ಶಿಕ್ಷಣದ ವಿಷಯಕ್ಕೆ ಬಂದರೆ ಶಿಕ್ಷಣದಲ್ಲಿ ಅವಶ್ಯಕ ಮಾರ್ಪಾಡುಗಳು ಮಾತ್ರ ನಮ್ಮ ಯುವ ಜನರ ಕೃಷಿಪರತೆಯನ್ನು ಹೆಚ್ಚಿಸಬಹುದು. ಶಿಕ್ಷಣ ಪದ್ಧತಿ ಪೂರ್ತಾ ಹದಗೆಟ್ಟಿದೆ...ಕೃಷಿಯಲ್ಲಿ ಸ್ವಾನುಭವಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾದ್ದು ಅನಿವಾರ್ಯ. ರಾಸಾಯನಿಕಗಳ ಬಳಕೆಯ ಸಾಮಾನ್ಯ ಪರಿಚಯ ಮತ್ತು ಪದ್ಧತಿಯನ್ನು ತಿಳಿಸಿಕೊಡಬೇಕಾದ್ದು ನಮ್ಮ ಕರ್ತವ್ಯ. ಹದವಾದ ಮತ್ತು ಮಿತವಾದ ಪ್ರಯೋಗ ಸಹಾ ಮುಖ್ಯ ಅಂಶ. ಕ್ರಿಮಿನಾಶಕಗಳ ಎರಡು-ಮೂರು ಪಟ್ಟು ಬಳಕೆ ಮಾಡುವ ಎಷ್ಟೋ ರೈತರನ್ನು ನಾನು ಖುದ್ದು ಕಂಡಿದ್ದೇನೆ ಅವರಿಗೆ ಹೆಚ್ಚುವರಿಯಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚೆಂದು ತಿಳಿಸಿಯೂ ಇದ್ದೇನೆ... ಈ ತಿಳುವಳಿಕೆ ರೈತಬಾಂಧವರಲ್ಲಿ ಮೂಡಿಸುವುದು ತಿಳಿದವರ ಕರ್ತವ್ಯ.

ನನ್ನ ಪ್ರಕಾರ ಯಾವುದನ್ನೂ ಧಿಡೀರ್ ಮಾಡುವುದರಿಂದ ತೊಂದರೆಗಳೇ ಹೆಚ್ಚು...ನಾರಾಯಣರೆಡ್ಡಿಯವರಂತೆ ಸಾಧ್ಯವಿರುವ ಹಲವಾರು ರೈತರು ಅಲ್ಲಲ್ಲಿ ಸಾಯವಯ ಕೃಷಿಯನ್ನು ಪ್ರಾರಂಭಿಸುವುದು ಕ್ರಮೇಣ ಎಲ್ಲ ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿಪಡಿಸುವುದು ಸಾಧ್ಯ. ಇಲ್ಲಿ ಅರಣ್ಯ ಅಥವಾ ಸಾಮಾಜಿಕ ಅರಣ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಯೂ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಕ್ರಿಮಿಕೀಟಗಳಿಗೆ ಆಶ್ರಯ ದೊರೆತಂತಾಗುತ್ತದೆ.

ನಮ್ಮ ಹಿರಿಯ ರೈತಮಿತ್ರ ನಾರಾಯನ ರೆಡ್ಡಿಯವರಿಗೆ ಶುಭ ಹಾರೈಕೆ ಸಲ್ಲಿಸಿ...ವಿಚಾರ ಮಂಥನಕ್ಕೆ ಅನುವುಮಾಡಿದ  ಲೇಖನವನ್ನು ಬ್ಲಾಗಿಸಿದ ಪರಾಂಜಪೆಯವರನ್ನು ಅಭಿನಂದಿಸುತ್ತೇನೆ.

Wednesday, December 22, 2010

ಅಯ್ನೋರೆ ಸ್ವಲ್ಪ ಎಚ್ರ
(ಬಾಬೂಜಿ ಧೀರೆ ಚಲ್ನಾ...ಶೈಲಿ/ಧಾಟಿ)


ಅಯ್ನೋರೆ ಸ್ವಲ್ಪ ಎಚ್ರ
ಲವ್ವಲೀ ಸ್ವಲ್ಪ ಹುಷಾರು
ಹಾಂ....ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ// ಅಯ್ನೋರೆ ಸ್ವಲ್ಪ//

ನೀವು ಬಿದ್ದಾಯ್ತು ಹುಡ್ಗೀರ ಹಿಂದೆ...
ಯಾಕೆ ಕಾಣ್ತಿಲ್ಲ ಸರಿ ದಾರಿ ಮುಂದೆ..
ಇದು ಅಯ್ನೋರ್ದು ಮೊದಲನೇ ಹೆಜ್ಜೆ
ಪ್ರತಿ ಹುಡ್ಗಿಯೂ ನಿಮ್ ಕಣ್ಗೆ ರಂಭೆ
ಹಾಂ ಇಲ್ಲಿ ಮೋಸಾನೇ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//

ಇದು ಹುಡ್ಗೀರು ಅಡ್ಡಾಡೋ ಜಾಗ
ಇದೆ ಅಯ್ನೋರ್ಗೂ ಕ್ಲಿಕ್ ಆಗೋ ಯೋಗ
ಬಲು ಯೋಚಿಸಿ ಮಾಡಿ ನಿರ್ಧಾರ
ಇಲ್ಲಾಂದ್ರೆ ಹಾಕ್ತಾಳೆ ಅವ್ಳೇ ಮೂಗ್ದಾರ...
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//

ಇಲ್ಲಿ ಏಮಾರ್ಸೋರ್ದೇ ಒಂದು ಧಂಧೆ
ಏಮಾರ್ದೇ ಇದ್ರೇ ಗೆಲ್ವು ನಿಮ್ದೇ
ನಿಮ್ಮ ಬುದ್ಧಿಗೆ ನೀವೇ ಸರದಾರ
ಇಲ್ಲಾಂದ್ರೆ ಆಗುತ್ತೆ ಜೀವ್ನಾನೇ ಭಾರ
ಹಾಂ...ಇಲ್ಲಿ ಮೋಸಾನೆ ..
ಇಲ್ಲಿ ಮೋಸಾನೇ ನಡೀತೈತಂತೆ//ಅಯ್ನೋರೆ ಸ್ವಲ್ಪ//





Wednesday, November 3, 2010

ಕಣ್ಣಿರುವ ಕುರುಡರು

ಕಣ್ಣಿಲ್ಲ ಕುರುಡನಾನು,


ಒಳಿತು ಕೆಡಕುಗಳನರಿಯೆ


ಕೈಯಲ್ಲಿ ಹಿಡಿದು ಲಾಂಧ್ರ


ಬುದ್ಧಿವಂತರ ಕಾಡಿಗೆ ಬಂದಿರುವೆ


ನಕ್ಕವರೆಷ್ಟೋ ಮಂದಿ


ಕಣ್ಣು ಮೊದಲೇ ಇಲ್ಲ


ಬುದ್ಧಿಯೂ ಕಳಕೊಂಡನಲ್ಲ..!!


ಕೇಳಿದ ಬುದ್ಧಿವಂತಗೆ ನನ್ನ


ನಮ್ರ ಉತ್ತರ....


ಕುರುಡ ನಾನು ಕಣ್ಣಿಲ್ಲ ಗೊತ್ತು


ಕಣ್ಣಿದ್ದೂ ಕುರುಡರು ನೀವು


ಲಾಂಧ್ರವ ಕಂಡೂ ಕೇಳುವಿರಿ


ಕೈಯಲ್ಲಿರುವುದೇನೆಂದು...


ನನಗಂತೂ ಇದರಿಂದಿಲ್ಲ ಉಪಯೋಗ


ತಂದೆ ಜೊತೆಯಲಿ


ಕಣ್ಣಿರುವ ಕುರುಡರಿಗೆ


ನಾನು ಬರುವುದು ಕಾಣಲೆಂದು.


ದೀಪ ಬೆಳಗುವುದೇ ಇದಕೆ


ನೋಡಿ ನಡೆಯಲೆಂದು


ನಯ ವಿನಯ ಎಚ್ಚರಿಕೆಗೆಂದು

Friday, October 1, 2010

ಗೊತ್ತಿಲ್ಲ ಮಗು

ಅಪ್ಪಾ



ಏನು ಮಗು?


ದೇವನಹಳ್ಳಿ ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಯ್ತು ಅಲ್ವಪ್ಪಾ?


ಹೌದು ಮಗು ನಾಡಿಗೆ ಒಳ್ಳೆ ವಿಮಾನ ನಿಲ್ದಾಣ ಸಿಕ್ತು


ಅದಲ್ಲಪ್ಪಾ..ಕೋಟ್ಯಾಂತರ ಸಿಕ್ಕ ರೈತ


ನಾಲ್ಕೈದೇ ವರ್ಷದಲ್ಲಿ ಬೀದಿಗೆ ಬಂದಾಂತ...


ಗೊತ್ತಿಲ್ಲ ಮಗು






ಅಪ್ಪಾ


ಹೇಳು.ಏನು?


ಮತ್ತೆ ಇನ್ನಷ್ಟು ದೇವನಹಳ್ಳಿ ದೊಡ್ಡಬಳ್ಳಾಪುರದ ರೈತರು


ಸರ್ಕಾರದ ಭೂ ಸ್ವಾಧೀನಕ್ಕೆ ಒಪ್ತಾ ಇಲ್ವಂತಲ್ಲಪ್ಪ


ಹೌದು ಕಣೋ ನೀನೇ ಹೇಳಿದ್ಯಲ್ಲ, ಬೇರೆ ಗೇಯ್ಮೆ ಗೊತ್ತಿಲ್ದೇ


ಹಣ ಖರ್ಚು ಮಾಡಿ ಬೀದಿಗೆ ಬರೋದು ಬೇಡಾಂತ..


ಅಲ್ಲಪ್ಪಾ..ಅವರ ಹೆಸರಲ್ಲಿದ್ದ ಜಮೀನು


ಮಂತ್ರಿಗಳು ದೋಚ್ಕಂಡವ್ರಂತೆ...?


ನಂಗೊತ್ತಿಲ್ಲ ಮಗು...






ಅಪ್ಪಾ..


ಇನ್ನೂ ಏನೋ ನಿಂದು...?


ಈ ಸರ್ತಿ ದಸರಾಕ್ಕೆ ಕರ್ಕೊಂಡು ಹೋಗ್ತೀಯಾ?


ಆಗಲಿ ಕಣೋ ನಿಮ್ಮಣ್ಣಂಗೆ ಹೇಳು


ರೈಲಲ್ಲಿ ಎಲ್ಲರಿಗೆ ಟಿಕೇಟ್ ಮಾಡ್ಸು ಅಂತ.


ಊಂ ನನಗೆ ಬೇಡ,, ನಮ್ಮ ಮುಖ್ಯಮಂತ್ರಿಗಳು


ಹೊಸ ವಿಮಾನ ನಿಲ್ದಾಣ ಮಾಡಿದ್ದಾರೆ, ವಿಮಾನದಲ್ಲೇ ಹೋಗ್ಬೇಕು


ಆಯ್ತಪ್ಪಾ..ನೀನು ನಿನ್ನಣ್ಣ ಇಬ್ಬರೇ ಹೋಗಿ ಬನ್ನಿ..


ಅಂದ ಹಾಗೆ ಅಲ್ಲೂ ಮಿನಿಸ್ಟ್ರ ಸಂಬಂಧೀಕರು


ಜಮೀನು ಕೊಂಡ್ಕೊಂಡಿದ್ದಾರಂತೆ...


ಲೋ ತರ್ಲೆ...


ನಂಗೊತ್ತಿಲ್ಲ ಕಣೋ...