(ಮಿತ್ರ ಪ್ರಕಾಶನ: ಛಾಯಾ ಚಿತ್ತಾರ ಬ್ಲಾಗಿಂದ)
ದೂರ ಗಗನದಂಚಿನಲಿ ಬೆಳ್ಳಿ ಚಿನ್ನ
ಲೇಪನವಾದಂತೆ ಮೇಘಕ್ಕೆ ಬಳಿದ ಬಣ್ಣ
ರವಿಕಿರಣಕೂ ದುರ್ಭರವಾಗುತಿದೆ
ಹಲ ಬಣ್ಣಗಳ ಮೋಡ ಕಪ್ಪಾಗುತಿದೆ
ತೇಲ ತೇಲುತ ಹೆಚ್ಚಿದಂತೆ ಭಾರ
ಭೂಮಿಗಿಳಿಯಲು ಸಾಗದ ಸಾರ....
ಮೇಘ ಕಪ್ಪಾಗುವುದನೋಡುವಾಸೆ
ಕಪ್ಪು ಸೂರಮೇಲೆ ಕರಗಿಸುವಾಸೆ
ಕರಗಿದ ಸೆಲೆಯಡಿ ತೊಯ್ಯುವಾಸೆ
ತೊಯ್ದ ಸುಖದಲಿ ಇನಿಯನ ತೋಳಿನಾಸೆ
ತೋಳ ಬಂಧನದಲಿ ಎಲ್ಲ ಮರೆತು
ಮತ್ತೆ ಮೇಘಕಾಣುವ ಕನಸಲಿ ಕರಗುವಾಸೆ.....
ಬಿರಿದ ಭೂಮಿಯ ಕಣ್ಬಿಟ್ಟ ನೋಟ
ಬೀಳ್ಬಿಟ್ಟ ಹೊಲ ಹಾತೊರೆವ ತೋಟ
ಕೆಲವೆಡೆ ಬಿದ್ದವು ಹನಿದಂತೆ ಹನಿ
ನಿರಾಸೆಯಲಿ ಮುನಿದಂತೆ ದನಿ
ಕಡೆಗೂ ಮುಖದಲಿ ಕಂಡಿತ್ತು ಹರ್ಷ
ಕಪ್ಪಾದ ಮೇಘ ಧರೆಗಿಳಿಯಿತು ವರ್ಷ