Thursday, May 21, 2009

ಮಹಾಮರ





ಕೊಕ್ಕಿಗೆ ಬೀಜ ಮೆತ್ತಿತ್ತು
ಅರಿವಿಲ್ಲದೇ ಬಿತ್ತಿತ್ತು
ಮಹಾವೃಕ್ಷಕ್ಕೆ ಆ ಸಣ್ಣಗಿಡ
ಆಗಿತ್ತು ಅಂಕುರಕೆ ದಡ
ನೋಡನೋಡುತಲೇ ಎಲೆ
ಹೆಣೆದು ಬೇರು ಗಿಡದ ಸುತ್ತ ಬಲೆ
ಗಿಡವಾಗತೊಡಗಿತು ಗೌಣ
ಬೀಜ ಬೀಗುವ ಮರಮಾಡಿ ತಾಣ
ಗಿಡ ಮಾಯವಾದದ್ದು,
ಮರ-ಅಮರವಾಗತೊಡಗಿದ್ದು,
ಆಸರೆಕೋರಿ ಬಂದದ್ದು,
ಮಹದಾಸರೆಯಾದದ್ದು,
ಬೇರು ಬೆರೆತದ್ದು,
ಕೊಂಬೆ ಬೇರುಬಿಟ್ಟದ್ದು,
ಚಾಚುಬಾಹು ಮರವಾದದ್ದು,
ಇದೆಲ್ಲ..ನಾವು ನೋಡಿಲ್ಲ
ನಮ್ಮ ಹಿರಿಯರಿಗೆ ನೆನಪಿಲ್ಲ
ಅಷ್ಟೇಕೆ ಅನ್ನುವರಲ್ಲ ಆಲಕ್ಕೆ ಹೂವಿಲ್ಲ.
ಇದು ಮಹಾ ವೃಕ್ಷ ಈಗ
ಪಾರ್ಕಿನಲಿ ವಿಹರಿಸಲು ಜಾಗ
ಹತ್ತಾರು ಮರಗಳು ಸೇರಿಕೊಂಡಂತೆ
ಸೂರಲಿ ಮೋಡ ಹರಡಿಕೊಂಡಂತೆ
ಆದರೆ...
ಒಂದು ದಿನ..!!??
ಬರಸಿಡಿಲು ಬಡಿದಂತೆ
ಧರೆಬಿರಿಯಿತೋ ಎಂಬಂತೆ
ಮಹಾವೃಕ್ಷ ಉರುಳಿತ್ತು ಧರೆಗೆ
ಒಮ್ಮೆಲೇ ತಲೆಯಮೇಲಿನ ಸೂರು
ಕಾಣದಾದಂತೆ
ಪಾರ್ಕು ಬಿಕೋ ಎನ್ನುತ್ತಿದೆ
ಆಲ ಇಲ್ಲದ್ದು ಏಕೋ ಕಾಡುತ್ತಿದೆ
ವಿಹಾರಾರ್ಥಿಗಳಿಗೆ ಆಸಕ್ತಿ ಇಲ್ಲದಾಗಿದೆ
ಮರದಿಂದಮರವಾಗುವ ಆಲ
ಸುತ್ತ ಹೆಣೆದ ಮಾನವ ಕೃತ್ರಿಮ ಜಾಲ
ಬೇರುಹರಡಲು ಇದಕೆ ಸಿಗದೆ ನೆಲ
ನೂರಾರು ವರ್ಷದ ಮಹಾ ಆಲ
ಧರೆಗುರುಳಿ ಕಂಡಿದೆ ಅಂತಿಮ ಕಾಲ
(Thanks Guru's World for the fotos and thought provocation)

8 comments:

  1. ಸರ್,

    ಮಹಾ ಮರದ ಬಗ್ಗೆ ಬರೆದ ಕವನ ಚೆನ್ನಾಗಿದೆ..ಅದರ ಸದ್ಯದ ಪರಿಸ್ಥಿತಿಯನ್ನು ಕವನದಲ್ಲಿ ಚೆನ್ನಾಗಿ ಪ್ರತಿಬಿಂಬಿಸಿದ್ದೀರಿ..

    ReplyDelete
  2. ಒ೦ದಿಡೀ ಪಾರ್ಕನ್ನು ಆವರಿಸಿದ್ದ, ಪರಿಸರಕ್ಕೆ ಭೂಷಣಪ್ರಾಯವಾಗಿದ್ದ, ಮಹಾವೃಕ್ಷ ಧರೆಗುರುಲಿದಾಗ ಉ೦ಟಾಗುವ ತಲ್ಲಣ ನಿಮ್ಮ ಬರಹದಲ್ಲಿ ಪಡಿಮೂಡಿದೆ. ಪರಿಸರ ಪ್ರಜ್ಞೆ ಇನ್ನಾದರು ಜಾಗೃತವಾಗಲಿ

    ReplyDelete
  3. ಶಿವು ಮತ್ತು ಪರಾಂಜಪೆಯವರಿಗೆ ಧನ್ಯವಾದಗಳೊಂದಿಗೆ...
    ಇನ್ನೊಂದು ಆಲದ ವಿಶೇಷ ಅಂಶವನ್ನು ಬಹುಶಃ ಹಲವರು ತಿಳಿಯಬೇಕಾಗಿದೆ.
    ವಾಸ್ತವವಾಗಿ ಆಲ ಅಮರಮರ....ಅಂದರೆ ಇದರವನತಿ ಆಗಲು ಸಾಧ್ಯವಿಲ್ಲ. ಏಕೆಂದರೆ ಕೊಂಬೆಗಳ ಶಾಖೆಗಳು ಭೂಮಿಯೆಡೆಗೆ ಚಾಚಿ, ಭೂಸ್ಪರ್ಶದ ನಂತರ ಬೇರುಬಿಡುತ್ತವೆ, ಆ ನಂತರ ಭೂಮಿಯಲ್ಲಿ ಹರಡುವ ಬೇರು ..ಆ ಕೊಂಬೆಯ ಶಾಖೆಯನ್ನು ಒಂದು ಆಲದ ಮರವನ್ನಾಗಿ ಪರಿವರ್ತಿಸುತ್ತದೆ...ಈ ಸರಣಿಗೆ ಅಂತ್ಯವಿಲ್ಲ ಅಂದರೆ ಮೂಲ ಮರ ನಶಿಸಿದರೂ ಅದರ ಕೊಂಬೆ ಮರವಾಗಿ..ಮತ್ತದರ ಕೊಂಬೆ ಮರವಾಗಿ.......
    ಹೀಗಿರುವಾಗ..ಆಲದ ಮರ ಅದ್ರಲ್ಲೂ ಈಗ ೨೦೦-೩೦೦ ವರ್ಷಗಳ ಮರಗಳನ್ನು..ಸಮಾಜ ಮಾತ್ರ ಅಲ್ಲದೇ ಸರ್ಕಾರವೂ ರಕ್ಷಿಸಬೇಕಾಗುತ್ತದೆ...ಏನೆನ್ನುತ್ತೀರಿ..?

    ReplyDelete
  4. ಪರಿಸರ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ... ಕವನ ತುಂಬಾ ಇಷ್ಟವಾಯಿತು

    ReplyDelete
  5. ವಿವೇಚನೆಯನ್ನು ಬಡಿದೆಬ್ಬಿಸುವ ಕವಿತೆ.

    -ಚಂದಿನ

    ReplyDelete
  6. ಸರ್, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.

    ReplyDelete
  7. ಚಂದಿನ ಅವರೇ, ಗೂಡಿಗೆ ಬಂದುದಕ್ಕೆ ಮ್ಮತು ಪ್ರತಿಕ್ರಿರಿಯಿಸಿದ್ದಕ್ಕೆ ಧನ್ಯವಾದಗಳು...
    ನಗಿಸು ಮೇಡಂ ನಿಮ್ಮ ಮಾತು ಮತ್ತು ಶಿವು ಅವರ ಮಾತು ತುಂಬಾ ಸಾಂದರ್ಭಿಕ...
    ನಮ್ಮ ಗಣಿಗಳನ್ನು (ವ್ಯಯವಾಗುವ ಮತ್ತು ನವೀಕರಿಸಲಸಾಧ್ಯವಾದ ನೈಸರ್ಗಿಕ ಸಂಪತ್ತು) ಕಾಪಾಡುವಂತೆ ಮರಗಳನ್ನು ಕಾಪಾಡುವುದು (ನಿಸರ್ಗ ಚಕ್ರದ ಅಮೂಲ್ಯ ಘಟಕಗಳು ಸಸ್ಯ ಸಂಪತ್ತು) ನಮ್ಮ ಎಲ್ಲರ ಮತ್ತು ಸರ್ಕಾರದ ಆದ್ಯತೆಯಾಗಬೇಕು..

    ReplyDelete
  8. ಜಲನಯನ,
    ಎಂಥಾ ದೊಡ್ಡದಾದ ಆಲದ ಮರವಿದು, ಕೆಳಗುರಲಿದ್ದನ್ನು ನೋಡಿದರೆ ಸಂಕಟವಾಗುತ್ತದೆ. ಚಿತ್ರ ಹಾಗೂ ಕವನದ ಮೂಲಕ ನಮ್ಮನ್ನು alert ಮಾಡಿದ್ದೀರಿ. ಧನ್ಯವಾದಗಳು.

    ReplyDelete