Friday, February 1, 2013

ಹಳ್ಳಿ-ಒಂದು ನೆನಪು

Foto: From web site

ಮನೆಯ ತುಂಬ ಚಿಂವ್ಗುಟ್ಟೋ ಗುಬ್ಬಿ
ಬರಲು ಬಾಲ್ಯದ ನೆನಪು ಬಾಚಿ ತಬ್ಬಿ
ಮರೆತಿಲ್ಲ ಗುಬ್ಬಕ್ಕ ಅಲ್ಲಿ ಹರಡಿದ ಕಾಳು
ಈಗ ಕಾಳೆಲ್ಲಿ ಆಗಿದೆ ನೀರಿಗೂ ಗೋಳು

ಹೊಲದ ತುಂಬ ಬೆಳೆದ  ಪಚ್ಚ ಪಯಿರು
ಅಲ್ಲವೇ ಇದುವೇ ಜೀವವೆಲ್ಲಕೆ ಉಸಿರು?
ಬೆಳೆದನ್ನದಾತನ ಕಾಯಕ ಹಾಲು ಮೊಸರು
ಇಳೆಯಗಲ ಹಸಿರುಟ್ಟು ತುಂಬಿತ್ತು ಬಸಿರು

ಗದ್ದೆ ತೋಟದ ಬದುಗಳಲ್ಲಿತ್ತು ಬದುಕು
ಇಲಿ ಹಾವು ಮುಂಗುಸಿ ಹದ್ದಿಗೂ ಸರಕು
ಕೆರೆಯಂಗಳ ತೊರೆಹಳ್ಳ ಕೋಡಿ ಕುಂಟೆ
ಹಾಗಿದ್ದ ದಿನಗಳವು ಮರೆಯುವುದು ಉಂಟೆ?

ಬಿಡದೆ ವಾರವಿಡೀ ಸುರಿದ ಧೋ ಮಳೆ
ಕೊಡದೆ ರೈತಗೂ ಎಡೆ ಹೊಲವೆಲ್ಲ ಕಳೆ
ಹೊರಟು ಎಂಕ, ಮಂಕ ಸುಬ್ಬಿ ಗೇಯ್ಮೆಗೆ
ಕಳೆಕಿತ್ತು ಬಿತ್ತು, ಪೈರು ನಾಟಿ ಕೊಯ್ಲಿಗೆ

ಬೆಳೆ ಬಂಗಾರ ಎಲ್ಲೆಡೆ ಭತ್ತ, ರಾಗಿ ಕಬ್ಬು
ಹೊಲಕಿಳಿದರೆ ಮೇವು, ಎಳ್ಳು ಅವರೆ ಗಬ್ಬು
ಇತಿಕವರೆ ವಗ್ಗರಣೆ ಸಾರು ಅಮ್ಮನ ಸಡಗರ
ಮುದ್ದೆ ಉಣ್ಣಲು ಬಿಗಿದು ಕಟ್ಟಿದ ಅಪ್ಪ ಧೋತರ

8 comments:

  1. ಹಳ್ಳಿಯ ವಾಸ್ತವಿಕ ಚಿತ್ರಣ...

    ಮತ್ತೊಮ್ಮೆ ಹಳ್ಳಿಗೆ ಓಡಿಹೋಗಿಬಿಡೋಣ ಅನ್ನಿಸಿತು....

    ಎಷ್ಟು ಚಂದ ನಮ್ಮ ಹಳ್ಳಿಗಳು ಅಲ್ವಾ?

    ಅಭಿನಂದನೆಗಳು ಚಂದದ ಕವನಕ್ಕೆ...

    ReplyDelete
  2. ಜಲನಯನ, ಹಳ್ಳಿಯಲ್ಲಿ ಕೆಲ ಕಾಲ ಕಳೆದ ನನ್ನ ಬಾಲ್ಯದ ನೆನಪೂ ಆಯಿತು. ಆ ವಾತಾವರಣವನ್ನು ಯಥಾವತ್ತಾಗಿ ಕವನಿಸಿದ್ದೀರಿ!

    ReplyDelete
    Replies
    1. ಧನ್ಯವಾದ ಸುನಾಥಣ್ಣ... ಹಳ್ಳಿಯ ಆ ದಿನಗಳು ಇಂದಿಗೂ ಮುದ ನೀಡುತ್ತವೇ ನೆನಪುಮಾತ್ರದಿಂದಲೇ

      Delete
  3. ಹಳ್ಳಿಯ ಚಿತ್ರಣ ಯಥಾವತ್ತಾಗಿ ಮೂಡಿದೆ. ಮುಗ್ಧ ಭಾವದ ಗ್ರಾಮೀಣ ಜೀವನ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವುದು ಅಷ್ಟೇ ವಿಷಾದನೀಯ.

    ReplyDelete
  4. ಹಳ್ಳಿಯ ಬದುಕು ನಾನೂ ಬದುಕು..ನೀನೂ ಬದುಕು...
    ಪಟ್ಟಣದ ಬದುಕು..ನಾನು ಬದುಕು...ನೀನು? ಇಂತಹ ಉದ್ಗಾರ ತೆಗೆವ ಪಟ್ಟಣದ ಜೀವನ..ಎಂತಹ ಜೀವನ ಅಲ್ಲವೇ..
    ಹಳ್ಳಿಯಲ್ಲಿ ಸೃಷ್ಟಿಯ ಪ್ರತಿಯೊಂದು ಜೀವಿಗೂ ಆಹಾರ, ಆಶ್ರಯ ಕಲ್ಪಿಸಿಕೊಡುವ ರೀತಿಯನ್ನು, ಮತ್ತು ಅದರ ಸ್ವಾಧವನ್ನು ಬಗೆ ಬಗೆಯಾಗಿ ಹೇಳಿರುವ ಪದಗಳಲ್ಲಿ ನಲಿದಾಡುತ್ತಿದೆ. ತುಂಬಾ ಸುಂದರ ನೆನಪುಗಳು ಸರ್ಜಿ

    ReplyDelete
    Replies
    1. ಶ್ರೀಮನ್...ಪಟ್ಟಣದ ಜೀವನ ಯಾಂತ್ರಿಕ...ಹಳ್ಳಿ ಜೀವನ ಮಾಂತ್ರಿಕ... ಧನ್ಯವಾದ

      Delete
  5. ಮಂಜುಳಾದೇವಿಯವರೇ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ./

    ReplyDelete