ಇಮಾಮ್ ಸಾಬಿ -ದುಶ್ಯಾಸ್ನಾಗಿದ್ದು.....
ನಾಟಕ ಪ್ರದರ್ಶನಕ್ಕೆ ಊರಲ್ಲಿ ಜೋರು ತಯಾರಿ ನಡೆದಿತ್ತು.. “ಊರುಭಂಗ” ನಾಟಕ. ದ್ರೌಪದಿ ಸೀರೆ
ಹರಣ ಪ್ರಸಂಗದಿಂದ ಪ್ರಾರಂಭ... ದುಶ್ಯಾನನ ಪಾತ್ರ ಸೀರೆ ಹರಣ ಪ್ರಸಂಗದಲ್ಲಿ ಮಾತ್ರ ಇತ್ತು. ಎಂಕ್ಟೇಸ..”ನಾನು
ದುಸ್ವಾಸನ್ಪಾಲ್ಟು ಮಾಡ್ತೀನಿ ಎಲ್ಲಾ ಕಿತ ಸುಬ್ಬಾನೇ ಮಾಡ್ತಾನೆ” ಅಂತ ಜೋರು ಮಾಡಿ ಪಾತ್ರ
ಗಿಟ್ಟಿಸಿದ್ದ. ಪ್ರಾಕ್ಟೀಸೂ ಚನ್ನಾಗೇ ಮಾಡಿದ್ದ. ನಾಟಕದ ಶ್ರೀರಾಮನವಮಿ ದಿವ್ಸ ಬೆಳಿಗ್ಗೆ ಮದ್ಯಾಹ್ನ ಅನ್ನದೇ “ಕೋಸಂಬರಿ, ಹೋಳಿಗೆ,
ಹಬ್ಬದ ಊಟ ಪಗಡ್ದಸ್ತಾಗೇ ಜಡ್ದ...’ಬ್ಯಾಡ್ವೋ ಒಟ್ಟೆ ಕೆಟ್ಟೋಯ್ತದೆ.. ಗಾಸಿ ಬಿದ್ದು ಪಾತ್ರ
ಗಿಟ್ಸಿದ್ದೀಯಾ’ ಅಂತ ಅವನ ಸ್ನೇಹಿತ ಹೇಳಿದ್ರೂ ಕೇಳಿರ್ಲಿಲ್ಲ ಅಂವ.
ರಾತ್ರಿ ೯.೦ ಕ್ಕೆ ನಾಟಕ ಶುರು ಆಗೋದು, ೮.೦ ಆದ್ರೂ ಆಸಾಮಿ ಪತ್ತೆ ಇಲ್ಲ...
ಸೀನ ಬಂದು ಗೌಡ್ರಿಗೆ ಹೇಳ್ದ “ನಾಟ್ಕದ ಮೇಟ್ರು ಸ್ಯಾನೆ ಟೆನ್ಸನ್ನಾಗವ್ರೆ ಕಣಣ್ಣೋ, ಈ
ಟೊತ್ತಾದ್ರೂ ನಿಮ್ತಮ್ಮನ್ಮಗ ಎಂಕ್ಟೇಸಾ ನಾಪತ್ತೆ, ಮೊದ್ಲ ಸೀನೇ ಅವನ್ದು” ಅಂದ
ಬೀಡಿ ಸೇದ್ತಾ ನಿಂತಿದ್ದ ’ಕೃಷ್ಣ’ ನ ಪಾತ್ರದ ರಮೇಸ...
“ಅಯ್ಯೋ ಗೌಡ್ರೇ.. ಒಂದೇ ಸಮನೆ..
ಚೊಂಬಿಡ್ಕೊಂಡು ಇತ್ಲ್ ಕಡೆ ಓಗಿದ್ದೇ ಓಗಿದ್ದು.. ಎಂಕ್ಟೇಸಾ..!! ಆವಾಗ್ಲೇ ನೋಡ್ದೆ..,
ಬಂದೌವ್ನೆ ಅಂದ್ಕಂಡೆ..ಇನ್ನೂ ಬರ್ನಿಲ್ವಾ...??”
ಶಿವೇಗೌಡ್ರಿಗೆ ಆತಂಕ... “ನೋಡ್ರಲೇ ಅಲ್ಲೇ ಇತ್ಲ್ ತಾವ” ಅಂದ್ರು
ಸೋಮ ಓಡ್ಕಂಡ್ಬಮ್ದು...ಏದುಸಿರ್ಬಿಡ್ತಾ...
“ಗೌಡ್ರೇ..ಎಂಕ್ಟೇಸ ಸುಸ್ತಾಗಿ ಮಲಗ್ಬಿಟ್ಟವನೆ... ಜ್ವರಾನೂ ಬಂದಂಗೈತೆ.. ಬರಾಕಾಗಾಕಿಲ್ಲ
ಯಾಸ ಆಕಲ್ಲ ಅವ್ನು ..ಅಂತ ಏಳೋಗೋ ಲೇ ..ನಾಟ್ಕದ್ ಮೇಟ್ರಿಗೆ” ಅಂತ ಅವ್ರಮ್ಮ ನನ್ನ
ಓಡ್ಸಿದ್ಲು...” ಅಂದ.
ನಾಟಕದ ಮೇಷ್ಟ್ರಿಗೆ ಏದುಸಿರು ಜಾಸ್ತಿ ಆಯ್ತು...
“ಲೇ ಏನಾದ್ರೂ ಮಾಡ್ರಲೇ...ಮೊದ್ಲೇ ಉಬ್ಬಸಾ ಈ ಮೇಟ್ರಿಗೆ..ಆ ಮ್ಯಾಕೆ ಟೆನ್ಸನ್ನಾಗೆ
ನಿಗತ್ಕಂಡ್ರೆ,,ಏನ್ಮಾಡನೇ.. ನಾಟ್ಕ ಅಂತ ನೋಡೋದಾ..ಇಲ್ಲ ಮೇಟ್ರ್ ಎಣ ಸಾಗ್ಸೋದಾ??” ಅಂದ್ರು
ಗೌಡ್ರು...
ಅಲ್ಲಿದ್ದ ಹಳ್ಳಿ ಹೈದರನ್ನೇನು ದೊಡ್ಡೋರನ್ನೂ ಕೇಳಿ ಆಯ್ತು... ಯಾರೂ...”ಊಹೂಂ...” ನಾನ್
ಮಾಡೊಲ್ಲ ಅನ್ನೋರೇ....
ಆಗ ಅಲ್ಲೇ ಇದ್ದೆ .. ನಾಕನೇ ಕ್ಲಾಸ್ ಶ್ರೀಕಾಂತ...
“ನಾನ್ಮಾಡ್ತೀನಿ ಗೌಡ್ರೆ...?? ನಾಟ್ಕ ಪ್ರಾಕ್ಟೀಸು ದಿನಾ ನೋಡಿದ್ದೀನಿ..ಬಾಯ್ಪಾಟ ಆಗದೆ
ಡೈಲಾಗು ದುಸ್ಯಾಸನ್ದು” ಅಂದ...
“ಲೇ ಓಗೋಲೇ... ಯಾವಾಗ್ ನೋಡಿದ್ರೂ ಗೊಣ್ಣೆ ಸಿರ್ಕೊಂಡಿರ್ತೀಯಾ... ಕೆಳಕ್ಕ್ ಬೀಳ್ದಂಗೆ
ಗೊಣ್ಣೆನ ಸೆಳ್ದೀಯೋ... ಇಲ್ಲ ಬಿದ್ ಬಿದ್ದೋಗೋ ನಿನ್ ನಿಕ್ಕರ್ ನ ಇಡ್ಕಂಡೀಯೋ ...ಅಲ್ಲಾ
ದ್ರೌಪದಿ ಸೀರೆ ಸೆಳ್ದೀಯೋ...” ಓಗೋ ಕ್ಯಾಮೆ ನೋಡು” ಅಂದ್ಬುಟ್ರು.. ಗೌಡ್ರು...
ಈಗೇನ್ಮಾಡೋದು... ಟೈಮೇ ಇಲ್ಲ ಅರ್ಧ ಗಂಟೆನೆ ಇರೊದು... ಸಾಲದ್ದಕ್ಕೆ ಬೆಂಗ್ಳೂರಿಂದ
ದ್ರೌಪದಿ ಪಾತ್ರಕ್ಕೆ ಎಣ್ಣು ಆಲ್ಟಿಸ್ಟ್ ಬಂದವಳೆ..?? !!!
ಅಲ್ಲೇ ಇದ್ದ ಇಮಾಮ್ ಸಾಬಿ ನ ನೋಡಿ ರಮೇಶ ಉರ್ಫ್ ’ಕೃಷ್ಣ’
“ಗೌಡ್ರೇ..ನಮ್ ನಾಟ್ಕದ್ ಎಲ್ಲಾ ಡೈಲಾಗೂ ಇಮಾಮಂಗೆ ಗೊತ್ತು... ಅವಂಗೇ ಆಕಿದ್ರೆ ಎಂಗೆ
ಯಾಸ,,,??” ಅಂದ
“ಅಲೆಲೆ ಔದಲ್ಲೋ... !!!”
ಏದುಸುರು ಎಳ್ಕೊಂಡೇ ಬಂದ ನಾಟಕದ ಮೇಷ್ಟ್ರಿಗೆ ಮುಳ್ಗೋನಿಗೆ ಹುಲ್ಕಡ್ಡಿ ಸಿಕ್ಕಂಗಾಯ್ತು...
ಇಮಾಮ್ ಸಾಬಿ ಕೈ ಹಿಡ್ಕಂಡು.... “ಲೇ ಸಾಬಿ ಮಾಡೋ ದುಸ್ಯಾಸನ ಪಾರ್ಟು” ಅಂದ್ರು
ಎಲ್ಲರ ಒತ್ತಾಯದ ಮೇಲೆ ಇಮಾಮ್ ನಾಟಕದ ದುಶ್ಯಾಸನನ ಪಾತ್ರಕ್ಕೆ ಬಣ್ಣ ಹಚ್ಚೇಬಿಟ್ಟ....
ನಾಟಕ ಶುರು ಆಯ್ತು...
ದ್ರೌಪದಿ..ಅಂತಃಪುರಕ್ಕೆ ಎಂಟ್ರಿ ಕೊಟ್ಟ ದುಸ್ಯಾಶನ...
“ಎಲೆ ದ್ರೌಪದಿ...!!!.... ನೀ,,,ನೀ...ನೀ.....”
ಯಾಕೋ.. ಎಡವಟ್ ಆಯ್ತು..ಇಮಾಮ್ ಸಾಬಿ ತಡವರಿಸ್ದ....
ಸೈಡ್ ವಿಂಗಿಂದ ನಾಟಕ ಪುಸ್ತಕ ಹಿಡ್ಕಂಡಿದ್ದ ಮೇಷ್ಟ್ರು... ಡೈಲಾಗ್
ಹೇಳ್ಕೊಟ್ರೂ...ಊಹೂಂ...
ಸೈಡ್ ವಿಂಗ್ ಪಕ್ಕಕ್ಕೆ ಬಂದ ಇಮಾಮ್ ..
“ಮೇಟ್ರೆ..ಡೈಲಾಗೂ..ನಮ್ದೂಕೆ ಬಂದಂಗೆ ಏಳ್ತೀನಿ...” ಅಂದ
“ಆಯ್ತೋ ಮಾರಾಯಾ ಏನೋ ಹೇಳಿ ಮುಗ್ಸು...” ಅಂದ್ರು ಮೇಷ್ಟ್ರು
ಇಮಾಮ್
ಉರ್ಫ್ ದುಶ್ಯಾಸನ: “ಕ್ಯಾಗೆ..ದುರಾವ್ ಪತ್ತಿ,..sss ನಿಮ್ದೂಕೆ ಬುಲಾವ್ ಅಂದ್ರೂ..ಬರೊಲ್ಲ ಕರ್ಕೋ ಹೇಳ್ತೀ..ssss?? ನಕ್ಕೋ
ನಕ್ಕೋ...ಚನ್ನಾಗಿ ಇರೊಲ್ಲ..!!!. ನಮ್ದೂಕೆ ಅಣ್ಣ ನಿಮ್ದೂಕೆ ಎಳ್ಕೊಂಡೂ ಬಾ ಕರ್ಕೋ ಏಳವ್ನೆ..
ಇಜ್ಜತ್ ಸೆ ಬಾ ಇಲ್ಲಾ ಅಂದ್ರೆ ನಿಮ್ದೂಕೆ ಎಳಕೊಂಡು ಓಗ್ತೀನಿ......”
ಅಂತೂ ಇಂತೂ...ದೃಶ್ಯ ಮುಗೀತು...ಪುಣ್ಯಕ್ಕೆ ಸಭೆ ಸೀನ್ ಬರೋ ಹೊತ್ತಿಗೆ.. ಸಾವರಿಸಿಕೊಂಡು
ಬಂದೇ ಬಿಟ್ಟ ಮೇಕಪ್, ವೇಶ ಏರಿಸ್ಕೊಂಡು ಎಂಕ್ಟ...!!!!
ಮೇಷ್ಟ್ರು ಖುಶೋ ಖುಷು... “ಬಂದ್ಯಾಪ್ಪಾ...ಅಂತೂ ಸಭೆ ಸೀನ್ ಹೊತ್ಗಾದ್ರೂ..
ಸಿಧ್ಹವಾಗಿದ್ದೀಯಲ್ಲಾ... ಜ್ವರ ಅಂತಿದ್ರು ಯಾರೋ...??!!!” ಅಂದ್ರು ಮೇಷ್ಟ್ರು.
“ಏನ್ ಮೇಟ್ರೇ ... ಬೆಂಗ್ಳೂರಿಂದಾ ಕರ್ಸೀರಿ ಈರೋಯಿನ್ನಾ... ಎಂಗ್ ಮಿಸ್
ಮಾಡಾಕಾದದು..ಅದ್ಕೇ ಒಂದ್ ಮಾತ್ರೆ ನುಂಗಿ ಸಿವಾ ಅಂತ ಬಂದ್ಬುಟ್ಟೆ...” ಅನ್ನೋದೇ ಎಂಕ್ಟೇಸ..???!!!!