Tuesday, October 13, 2015

ದೇಹ - ದೇಶ


ಮಾನವ ದೇಹ ಒಂದು ಅದ್ಭುತ ಮತ್ತು ಅತಿ ಹೆಚ್ಚು ಕ್ಲಿಷ್ಟ ಸಂವಹನ, ಸಂಚಲನ ಮತ್ತು ಕ್ರಿಯಾಶೀಲತೆಗಳ ಆಗರ. ಒಂದೊಂದು ಅಂಗವೂ ಒಂದೊಂದು ಅಗಾಧ ಜ್ಞಾನದ ಗ್ರಂಥಮಾಲಿಕೆ. ಎಲ್ಲವೂ ಉದ್ಭವವಾಗುವುದು ಒಂದೇ ಒಂದು ಕೋಶಮಿಲನ ಕ್ರಿಯೆಯಿಂದ. ಅರ್ಧ ಒಂದೆಡೆಯದಾದರೆ ಇನ್ನರ್ಧ ಮತ್ತೊಂದೆಡೆಯದು. ಆ ಅರ್ಧಗಳೋ ಪೂರ್ಣಸಾಕಾರದಲ್ಲಿ ಎಷ್ಟೊಂದು ವಿಭಿನ್ನ!!? ಒಂದು ಇನ್ನೊಂದರ ಪೂರಕ, ಮಾರಕ, ಪೀಡಕ, ಕ್ಲೇಶಕ, ಹರ್ಷಕ, ಏನೆಲ್ಲಾ ಆಗಬಹುದೋ ಆಗುವಂತಹವು. ಆ ಕೋಶಗಳು ಸೇರುವ ಕ್ರಿಯೆಯೂ ಅಲ್ಲಿ ನಡೆಯುವ ಪ್ರಕ್ರಿಯೆಗಳ ಹಿನ್ನೆಲೆ ಮತ್ತು ಪರಿಣಾಮಗಳೂ ಸಿದ್ಧವಾಗುವ ಜೀವಿಯ ಎಲ್ಲಾ ಗುಣಗಳಿಗೆ ನಾಂದಿ ಹಾಡುವಂತಹವು. ಅರ್ಧ ಭಾಗದ ಜೀವವಾಹಿನಿಗಳು ಇನ್ನರ್ಧದ ಜೀವವಾಹಿನಿಗಳ ಜೊತೆಗೂಡಿ ಸಂಕೇತ ಗ್ರಂಥವನ್ನು ರಚಿಸುತ್ತವೆ. ಆ ರಚೆನೆಯೋ ಬೆಳೆದ ದೇಹಕ್ಕೆ ಅರ್ಥವಾಗದ ಭಾಷೆಯಲ್ಲಿರುತ್ತವೆ. ಆಶ್ಚರ್ಯವೆಂದರೆ ಅರ್ಥವಾಗದ ಸಂಕೇತಗಳೇ ಭಾಷೆಯನ್ನೂ ಕಲಿಸುತ್ತವೆ. ಭಾಷೆಯನ್ನು ಕಲಿತ ಪಂಡಿತ ಪೋಷಕಗಳು ರಕ್ತವೃದ್ಧಿ, ಕೋಶವೃದ್ಧಿ, ಅಂಗಬೆಳವಣಿಗೆ, ಬುದ್ಧಿ, ಯೋಚನೆ, ಕ್ರಿಯಾಶೀಲತೆ, ಎಲ್ಲವನ್ನೂ ಕೊಡುವಂತೆ ರೋಗ ರುಜಿನಗಳನ್ನು ತರುವುದು ಹೇಗೆಂದೂ, ಅವನ್ನು ಹೋಗಲಾಡಿಸುವ ಬಗೆ ಏನೆಂದೂ ತನಗೇ ತಿಳಿಯದ ಭಾಷೆಯನ್ನು ತನ್ನಲ್ಲಿ ತರಲು ಯತ್ನಿಸಿದರೆ ತಾನು ಹೇಗೆ ದೇಹ ನಿಘಂಟಿಗೆ ಸಿಗದ ಭಾಷೆಯಾಗುತ್ತೇನೆಂದೂ ಸಂಕೇತಗಳಲ್ಲೇ ಹೇಳುತ್ತವೆ. ಈ ಸಂಕೇತಗಳ ಕ್ರಿಯೆ, ಅತಿಕ್ರಿಯೆ ಅಥವಾ ತಟಸ್ಥತೆಗಳ ಆಧಾರದ ಮೇಲೆಯೇ ದೇಹಸ್ಥಿತಿ ಅವಲಂಬಿಸಿರುತ್ತದೆ. ಇವೆಲ್ಲದರ ಜೊತೆಗೆ ಈ ಸಂಕೇತಗಳು ಸ್ವನಿಯಂತ್ರಣೆಯನ್ನೂ ಮಾಡಬಲ್ಲವು.
ಈ ಎಲ್ಲಾ ಕ್ರಿಯೆಗಳಿಗೂ ನಂಟು ತರುವುದು ಬಾಹ್ಯ ಮಾಧ್ಯಮ - ಗಾಳಿ, ಭೂಮಿ, ನೀರು. ಈ ಅಂಶಗಳಲ್ಲೂ ಜೀವ ಸಂಕೇತಗಳ ಮೂಲ ಘಟಕಗಳು ಇರುವುದರಿಂದ ಈ ಮಾಧ್ಯಮದ ಬದಲಾವಣೆಗಳು ಜೀವವಾಹಿನಿಗಳ ಸಂಕೇತಗಳನ್ನೇ ಆಚೀಚೆ ಮಾಡುವ ಗುಣಹೊಂದಿರುತ್ತವೆ. ಒಂದು ಹಂತದವರೆಗೆ ಈ ಮಾಧ್ಯಮಗಳ ಪ್ರಭಾವವನ್ನು ಇಲ್ಲವಾಗಿಸುವ ಅಥವಾ ನಿಷ್ಕ್ರಿಯಗೊಳಿಸುವ ಅಂತಃಶಕ್ತಿ ಈ ಸಂಕೇತ ಮತ್ತು ಪಂಡಿತ ಪೋಷಕಗಳಿಗಿದ್ದರೂ ಮಿತಿ ಮೀರಿದಾಗ ಹಾನಿ ಮೂಲಕ್ಕೇ ಆಗುವುದಂತೂ ಖಂಡಿತ. ಸಾಮಾನ್ಯವಾಗಿ ಬಾಹ್ಯ ಮಾಧ್ಯಮದ ಮೂಲ ಘಟಕಗಳು ಸಂತುಲಿತ ಪ್ರಮಾಣ ಮತ್ತು ಕ್ರಿಯಾಗತಿಗಳಲ್ಲಿದ್ದರೂ ಅಗೋಚರ ಮತ್ತು ಅಸಾಮಾನ್ಯ ಶಕ್ತಿಯೊಂದು ಅಗಾಧ ಏರು ಪೇರಿಗೆ ಕಾರಣವಾಗಬಹುದು. ಆಗ ಎಲ್ಲಾ ಸೃಷ್ಟಿಯ ಎಲ್ಲಾ ಘಟಕಗಳೂ ಪ್ರಭಾವಕ್ಕೊಳಗಾಗುವುದು ಖಂಡಿತ ಮತ್ತು ಹಾಗಾಗಿದೆ ಕೂಡಾ.
ಒಂದಕ್ಕೊಂದು ಹೀಗೆ ಅಗಣಿತ ಮತ್ತು ಅನೂಹ್ಯ ರೀತಿಯ ಸಂಬಂಧಗಳನ್ನು ಹೊಂದಿರುವ ನಾವು ಕಾಣುವ ಲೋಕದಲ್ಲಿ ದೇಹದ ಸ್ಥಿತಿ ಮತ್ತು ದೇಶದ ಸ್ಥಿತಿ ಒಂದೇ ರೀತಿಯವು. ದೇಹದ ಅಂಗಗಳು ಒಂದಕ್ಕೊಂದು ಸಹಕಾರ ಮತ್ತು ಸಹಾಯ ನೀಡದಿದ್ದರೆ ಆಯಾ ಅಂಗ ಮಾತ್ರವಲ್ಲ ಇಡೀ ದೇಹವೇ ಪ್ರಭಾವಿತವಾಗುತ್ತದೆ. ಸಮಾಜದ ಘಟಕಗಳ ಬಾಧ್ಯತೆಗಳೂ ಹೀಗೆಯೇ. ಜವಾಬ್ದಾರಿ ಅರಿತು ನಡೆಯುವ ಪ್ರತಿಕೋಶದ ಬಾಧ್ಯತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಂಗದ ಸಮಯಾಸಮಯ ಕ್ರಿಯಾಶೀಲತೆ ಹಾಗೆಯೇ ಪ್ರತಿಯೊಬ್ಬ ಪ್ರಜೆಯೂ ದೇಶದ ಹಿತ ಮತ್ತು ಆರೋಗ್ಯದ ದೃಷ್ಟಿಯಿಂದ ಹೊರ ಪ್ರಭಾವಗೊಳಗಾಗದೇ ತನ್ನತನ ಕಾಪಾಡಿಕೊಳ್ಳಬೇಕು, ಹಾಗೆಯೇ ವರ್ತಿಸಬೇಕು. ತನ್ನ ಮೂಲ ಸಂಕೇತಗಳನ್ನು ಬಾಹ್ಯ ಪ್ರಭಾವಗಳಿಗೆ ಒಡ್ಡಿ ಪ್ರಭಾವಿತಗೊಳಿಸಬಾರದು, ಬಾಹ್ಯಘಟಕಗಳ ಪ್ರಭಾವವನ್ನು ಆಗ ದೇಶ ಸಮರ್ಥವಾಗಿ ಎದುರಿಸಬಲ್ಲದು. ತನ್ನಲ್ಲೇ ಸಂಕೇತಗಳ, ಸಂದೇಶಗಳ ಕೋಶಗಳ ಮತ್ತು ಅಂಗಗಳ ತಿಕ್ಕಾಟವಾದರೆ ದೇಹ ಧೃತಿಗೆಡುವುದು ಹೇಗೆ ಸ್ವಾಭಾವಿಕವೋ ಹಾಗೆಯೇ ದೇಶದ ಘಟಕಗಳಾದ ಪ್ರಜೆ, ಸಮಾಜ, ಧರ್ಮ, ಸಂಘಟನೆ, ರಾಜ್ಯ (ಸಂಕೇತಗಳ ಕ್ರಮಬದ್ಧ ಕಟ್ಟುಪಾಡಿನ ಪರಿಧಿಯ ಅಂಗರಚನೆ) ಎಲ್ಲವೂ ತಮ್ಮ ತಮ್ಮ ಜವಾಬ್ದಾರಿಯರಿತು ನಡೆದುಕೊಳ್ಳಬೇಕಾಗುತ್ತದೆ.   

Friday, June 12, 2015

ಕನಸುಗಳು – ಕಂಡರೂ ಕಾಣದ ಸೊಗಸುಗಳು


ಕನಸುಗಳು – ಕಂಡರೂ ಕಾಣದ ಸೊಗಸುಗಳು
ಶಾಲೆಯಲ್ಲಿ ಕಲಿಯುವಾಗ “ತಿರುಕನ ಕನಸು” ಉರುಹೊಡೆದು ಮಾಸ್ತರ ಮುಂದೆ ಕಕ್ಕುವ ೩-೪ ನೇ ತರಗತಿ ಶಾಲಾ ಮಗುವಿಗೆ ಗುರುಗಳು ಅರ್ಥ ವಿವರಿಸಿದ್ದರೆ.. ಅದನ್ನೂ ಈಗಲೂ ಮರೆತಿರಲಿಕ್ಕಿಲ್ಲ, ಅಲ್ಲವೇ..? ತಿನ್ನಲು ಗತಿಯಿಲ್ಲದೇ ಮುರುಕು ಧರ್ಮಶಾಲೆಯಲ್ಲಿ ಒರಗಿರುವಂತೆಯೇ ಅರಸನಾದ ತಿರುಕ ಈಗಲೂ ಕಾಡುತ್ತಾನೆ, ಏಕೆ ಕನಸು ಬೀಳುತ್ತೆ...? ಈ ಪದವೇ ನನಗೆ ತಮಾಶೆ ಅನ್ಸುತ್ತೆ...ಕನಸು ಬೀಳುತ್ತಾ..? ಎಲ್ಲಿಂದ ಬೀಳುತ್ತೆ..? ಆದರೆ ಅದು ಅಲ್ಲೇ (ಎಲ್ಲಿ ಅಂತ ಗೊತ್ತಿಲ್ಲ) ಯಾಕಿತ್ತು? ಮಲಗಿದಾಗ ಬೀಳೋದಾ..? ಆದ್ರೂ ಹಿಡೀತಿವಲ್ಲಾ...ನಾವು?.. ಕೈಯಲ್ಲಿ ಅಲ್ಲದಿದ್ದರೂ ಕಣ್ಣಲ್ಲಿ..?!!
ಅದು ಹಾಗಿರಲಿ ಕನಸು ಕಾಣ್ತೇವೆ ಅನ್ನೋದಂತೂ ನಿಜ, ಏನು, ಏಕೆ, ಹ್ಯಾಗೆ..? ಇದು ಎಲ್ಲರಿಗೂ ಗೊತ್ತಿಲ್ಲದಿರುವುದಂತೂ ನಿಜವಾದರೂ.. ಕನಸ ಕಾಣೋದನ್ನ ನಾನಂತೂ ಇಷ್ಟಪಡ್ತೇನೆ. ಒಂದಂತೂ ನನಗೆ ಈ ವರೆಗೂ ಅರ್ಥವಾಗಿಲ್ಲ. ಕನಸಲ್ಲಿ ಹಾವು, ಚೇಳು ಬಂದರೆ ಹೆದರಿ ಓಡಲಾಗುವುದಿಲ್ಲ..ಏಕೆ..? ತಮಾಶೆ ಅಂದ್ರೆ ಅದು ಕಚ್ಚೋದೂ ಇಲ್ಲ.
ಈಗ ಕನಸು ಏನು..? ಇದನ್ನ ತಿಳಿಯೋಣವೇ??
 ಹತ್ತೊಂಬತ್ತನೇ ಶತಮಾನದಲ್ಲಿ ಕನಸುಗಳಿಗೊಂದು ತತ್ವ-ಸಿದ್ಧಾಂತಕ್ಕೆ ರೂಪ ಕೊಡುವವರೆಗೆ ಕನಸುಗಳು ಮಾನವನ ಹಿಂದಿನ ಮತ್ತು ಇಂದಿನ ನಡುವೆಯ ಅಗೋಚರ ಕೊಂಡಿ, ಅದು ಮಾನವನನ್ನು ದೇವರೊಂದಿಗೆ ಸಂಪರ್ಕಿಸುವಂತೆ ಮಾಡುವ ಮಾಧ್ಯಮ ಎಂಬುದಾಗೆಲ್ಲಾ ತಿಳಿಯಲಾಗಿತ್ತು. ಸಿಗ್ಮಂಡ್ ಫ್ರ್ಯೂಡ್ ಮತ್ತು ಕಾರ್ಲ್ ಜಂಗ್ ಎಂಬ ಇಬ್ಬರು ವಿಜ್ಞಾನಿಗಳು ಕನಸುಗಳಿಗೆ ಆಧುನಿಕ ಸಿದ್ಧಾಂತವನ್ನು ನೀಡಿದರು. ಫ್ರ್ಯೂಡ್ ಕನಸುಗಳು ಅದುಮಿಟ್ಟ ಮನದ ಸುಪ್ತತೆಯ ಸಾಕ್ಷಾತ್ಕಾರ ಎಂದರೆ ಆತನ ಶಿಷ್ಯನಾದ ಜಂಗ್ ಸುಮಾರು ಇದೇ ಅಭಿಪ್ರಾಯ ಹೊಂದಿದ್ದರೂ ಹೊಸ ಅಯಾಮವನ್ನು ತೆರೆದಿಟ್ಟ. ಇಬ್ಬರದ್ದೂ ಕನಸುಗಳು ಮನೋವೈಜ್ಞಾನಿಕ ಘಟಕಗಳು ಎಂದಿದ್ದಂತೂ ನಿಜ. ಇವರಿಬ್ಬರ ನಂತರ ವೈಜ್ಞಾನಿಕ ಜಗತ್ತಿನಲ್ಲಾದಾ ಆವಿಷ್ಕಾರಗಳು ವಿವಿಧ ಸಾಧನ, ಪರಿಕರಗಳ ಕಾರಣ ಕನಸುಗಳನ್ನು ಇನ್ನೂ ಹೆಚ್ಚು ಕೂಲಂಕಶವಾಗಿ ಅಧ್ಯಯನಗಳಿಗೆ ಒಳಪಡಿಸಲಾಯಿತು. ಈ ಎಲ್ಲಾ ಅಧ್ಯಯನಗಳ ಪರಿಣಾಮ ಒಂದು ಹೆಚ್ಚು ಮಾನ್ಯ ಸಿದ್ಧಾಂತ ಹೊರಹೊಮ್ಮಿತು. ಈ “ನರಜೈವಿಕ” (ನ್ಯೂರೋಬಯಾಲಾಜಿಕಲ್) ಸಿದ್ಧಾಂತದ ಪ್ರಕಾರ ಇದೊಂದು ಒಗ್ಗೂಡಿಸುವ ಕ್ರಿಯಾತ್ಮಕತೆ ಸಿದ್ದಾಂತ (ಆಕ್ಟಿವೇಶನ್-ಸಿಂತಸಿಸ್ ಥಿಯರಿ). ಇದರ ಪ್ರಕಾರ ಕನಸುಗಳು ಯಾದೃಚ್ಛಿಕ ಯೋಚನೆ ಮತ್ತು ಚಿತ್ರಗಳನ್ನು ಸೆಳೆಯುವ ಮಿದುಳಿನ ವಿದ್ಯುತ್ಸಂಕೇತಗಳ ಸಂವಹನೆ ಮತ್ತು ಅವುಗಳನ್ನು ನರವ್ಯೂಹ ತನ್ನದೇ ರೀತಿಯಲ್ಲಿ ನಮಗೆ ತಿಳಿಸುವ ರೀತಿ. ಈ ವಿದ್ಯುತ್ ಸಂಕೇತಗಳನ್ನು ಮಾನವ ತನ್ನ ಪ್ರಜ್ಞಾವಸ್ಥೆಯಲ್ಲಿ ಒಗ್ಗೂಡಿಸಿ ಅರ್ಥಪೂರ್ಣ ಚೌಕಟ್ಟನ್ನು ನೀಡಲು ಪ್ರಯತ್ನಿಸುತ್ತಾನೆ, ಅದಕ್ಕೊಂದು ಕಥೆ, ಕೊಂಡಿ ನೀಡಲು ಪ್ರಯತ್ನಿಸುತ್ತಾನೆ. ಕನಸುಗಳು ಮನಸಗಳ ಪ್ರೊಜೆಕ್ಟರುಗಳು ಎಂದರೆ ತಪ್ಪಿಲ್ಲ.
ಹಾಗಾದರೆ ಕನಸುಗಳನ್ನು ಯಾರೆಲ್ಲಾ ಕಾಣುತ್ತಾರೆ?
ಬಹುಶಃ ಎಲ್ಲಾ ಮಾನವರು, ಪ್ರಾಣಿಗಳು ಕನಸು ಕಾಣುತ್ತವೆ. ಅದರಲ್ಲೂ ಬೆಕ್ಕಿನ ಕನಸುಗಲ ಬಗ್ಗೆ ಅಧ್ಯಯನಗಳೇ ನಡೆದಿವೆ. ಮತ್ತೆ ಬೇರೆ ಪ್ರಾಣಿಗಳು..? ನಿದ್ದೆ (ನಾವು ಅರಿತಂತಹ ಅವಸ್ಥೆ) ಮಾಡದ ಪ್ರಾಣಿಗಳೂ ಕನಸು ಕಾಣುತ್ತವೆಯೇ? ಮೀನುಗಳಲ್ಲಿ ನಾವು ಮಾಡುವ ರೀತಿಯ ನಿದ್ದೆ ಎಂಬುದು ಇಲ್ಲದಿದ್ದರೂ (ಯಾರಿಗೆ ಗೊತ್ತು? ಅವುಗಳ ಕಣ್ಣ ರೆಪ್ಪೆ ಪಾರದರ್ಶಿ..!! ನಿದ್ದೆ ಮಾಡುತ್ತವೆಯೋ ಏನೋ..?!!) ಅವುಗಳಲ್ಲಿ...? ಹೌದು ಮೀನಿಗೂ ಕನಸು ಬೀಳುತ್ತಂತೆ. ಇದನ್ನು ಹಲವು ಹವ್ಯಾಸಿ ಅಕ್ವೇರಿಯಂ ತಜ್ಞರು ಮತ್ತು ಮೀನಿನ ನಡಾವಳಿ ತಜ್ಞರ ಮಾತಿನಂತೆ ಮೀನು ನಿದ್ದೆ ಮಾಡುತ್ತಾ ಈಜುತ್ತದಂತೆ (ಅಯ್ಯೋ ನನ್ನ ತಮ್ಮ ನಿದ್ದೆಯಲ್ಲೇ ಮಂಚದಿಂದ ಇಳಿದು ಮಹಡಿ ಮೇಲಿಂದ ಮೆಟ್ಟಿಲ ಮೂಲಕ ಕೆಳಗಡೆ ಇರುವ ಬಚ್ಚಲಿಗೆ ಹೋಗಿ ತನ್ನ ಜಲಬಾಧೆ ತೀರಿಸಿ ಬರ್ತಾನೆ..ಅಂತ ಯಾರೋ ಹೇಳಿದ್ದೂ ನೆನಪಿದೆ!!). ಕುದುರೆ ನಿದ್ದೆಯೇ ಮಾಡುವುದಿಲ್ಲ ಎನ್ನುವುದನ್ನೂ ಹಲವರು ಹೇಳುವುದುಂಟು. ಮೆಸಾಚಿಸೆಟ್ಸ್ ತಾಂತ್ರಿಕವಿಜ್ಞಾನ ಸಂಸ್ಥೆಯಲ್ಲಿ ನಡೆದ ಪ್ರಯೋಗದಲ್ಲಿ “ಇಲಿ”ಗಳೂ ಕನಸು ಕಾಣುತ್ತವೆಂದು ದೃಢಪಟ್ಟಿದೆ. ಆ ಪ್ರಯೋಗದಲ್ಲಿ ಇಲಿಗಳಿಗೆ ಮಿದುಳು ಸಂವಹನಾ ಕ್ರಿಯೆಯನ್ನು ಅಳೆಯಬಲ್ಲ ಸಾಧನಗಳನ್ನು ಅಳವಡಿಸಿ “ದಿಗ್ಭ್ರಮೆ ಚಕ್ರ” (ಮೇಜ್) ನಲ್ಲಿ ಓಡುವಂತೆ ಮಾಡಲಾಯಿತು, ನಂತರ ಅವುಗಳ ನಿದ್ರಾವಸ್ಥೆಯಲ್ಲೂ ಮೇಜ್ ನಲ್ಲಿ ತೋರಿದ ಸಂಕೇತಗಳು ಕಂಡುಬಂದವು, ಅವುಗಳಿಗೆ ದಿಗ್ಭ್ರಮೆ ಚಕ್ರದ ಭ್ರಮೆಯ ಕನಸು ಈ ಸಂಕೇತಗಳಿಗ ಕಾರಣವೆಂದು ನಿರ್ಧರಿಸಲಾಯಿತು. ಕೊಲರಾಡೋ ವಿಶ್ವವಿದ್ಯಾನಿಲಯದ ವಿಕಸನ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಮರ್ಕ್ ಬೆಕಾಫ್ ಪ್ರಕಾರ, ಎಲ್ಲಾ ಜೀವಿಗಳೂ (ಬಹುಶಃ ಕಶೇರುಕಗಳಿಗೆ ಹೆಚ್ಚು ಅನ್ವಯಸುವಂತೆ) ಮೂಲ ಪರಿಸೃಷ್ಟಿಯ ವಿಕಸನದ ಹಾದಿಯಲ್ಲಿ ಬೆಳೆದಿವೆ ಎಂದಮೇಲೆ ನಮ್ಮಲ್ಲಿ ಕಂಡುಬರುವ ಎಲ್ಲಾ ಮೂಲ ಕ್ರಿಯೆಗಳೂ ಕಶೇರುಕಗಳಲ್ಲಿ ಇರಲೇಬೇಕು, ಇದೇ ವಿಕಸನವಾದ. ಹಾಗಿದ್ದರೆ ಕನಸುಗಳ ಪ್ರಕ್ರಿಯೆ ಪ್ರಾಣಿಗಳಲ್ಲಿ, ಅಷ್ಟೇಕೆ ಮೀನಿನಲ್ಲೂ ಇರಬೇಕು. ಆದರೆ ಅವುಗಳ ವೈವಿಧ್ಯತೆಯಲ್ಲಿ ಬದಲಾವಣೆಗಳಿರಬಹುದು. ಉದಾಹರಣೆಗೆ ದೃಷ್ಟಿ ಎಲ್ಲರಿಗೂ ಇದೆ ಆದರೆ ಕೆಲ ಪ್ರಾಣಿಗಳಲ್ಲಿ ಬಣ್ಣಗಳನ್ನು ಗುರುತಿಸುವ ಶಕ್ತಿ ಇರುವುದಿಲ್ಲವಲ್ಲಾ ಹಾಗೆ. ನನಗೂ ಅವರ ಮಾತು ನಿಜವೆನಿಸುತ್ತದೆ. ಮೀನಿನಲ್ಲಿ ಚಿಕ್ಕ ಮೀನನ್ನು ದೊಡ್ಡಮೀನು ತಿನ್ನುತ್ತದೆಂಬುದು (ಮಾಂಸಾಹಾರಿ ಅಥವಾ ಕಾರ್ನಿವೋರ್ ಮೀನುಗಳಲ್ಲಿ) ನಿರ್ವಿವಾದವಾದದ್ದು. ಹೀಗೆ ಇಂತಹಾ ಮೀನಿನ ಜಾತಿಯೊಂದರ ಮೇಲಿನ ಅಧ್ಯಯನಗಳಲ್ಲಿ ದಿನವೂ ಬೆಳಿಗ್ಗೆ ೭-೮ ಗಂಟೆಯ ನಡುವೆ ಅವುಗಳಿಗೆ ಆಹಾರ ಹಾಕುತ್ತಿದ್ದುದು ನನ್ನ ವಾಡಿಕೆಯಾಗಿತ್ತು. ದೊಡ್ದ ಮೀನು ಸಣ್ಣ ಮೀನನ್ನು ಅಟ್ಟಿಸಿಕೊಂಡು ಹೋಗುವಾಗ ಸಣ್ಣಮೀನು ಹೆದರಿ ಓಡುವುದು ಸಹಜವಾಗಿಯೇ ಗಮನಿಸುವಂತಹುದು. ಆದರೆ, ಈ ಮೀನಿನ ಗಾತ್ರಾವಾರು ವಿಂಗಡಣೆ ಮಾಡಿ ಬೇರೆ ಬೇರೆ ಇಟ್ಟಾಗ, ಮೊದಲ ಕೆಲ ವಾರಗಳು ಸಣ್ಣ ಮೀನಿನ ವಿಚಿತ್ರ ವರ್ತನೆ ಕಂಡೆ. ಅವುಗಳಿಗಳ ಹತ್ತಿರ ಯಾವುದೇ ಮೀನು ಇಲ್ಲದಿದ್ದರೂ ಹೆದರಿ ಓಡುವುದು ಕಂಡಿತು. ಆಗ ನಾನು ಅಂದುಕೊಂಡದ್ದು ಬಹುಶಃ ಪ್ರೊ.ಬೆಕಾಫ್ ರ ಮಾತಿನಂತೆ ನಿಜವೆನಿಸುತ್ತಿದೆ. ಆ ಸಣ್ಣ ಮೀನಿನ ಕನಸಲ್ಲಿ ದೊಡ್ಡ ಮೀನು ಅಟ್ಟಿಸಿಕೊಂಡು ಬಂದಂತೆ ಆಗಿರಬೇಕು. ಆದರೆ ಈ ವರ್ತನೆ ಕೆಲವಾರ ಮಾತ್ರ, ನಂತರ ಅದು ಅಂತಹಾ ವರ್ತನೆಯನ್ನು ತೋರಲಿಲ್ಲ.
ಕನಸುಗಳನ್ನು ನಾವು ಮೆಲಕು ಹಾಕುತ್ತೇವೆ ಹಾಗೆಯೇ ನಮ್ಮ ಮನಸ್ಸನ್ನು ಅರಿಯುತ್ತೇವೆ, ಅಲ್ಲವೇ? ನಮ್ಮಲ್ಲಿ ಬಣ್ಣದ ಕನಸು ಕಂಡವರೂ ಉಂಟು, ಕೆಲವರಿಗೆ ಕೇವಲ ಕಪ್ಪು-ಬಿಳುಪು ಕನಸುಗಳು ಬೀಳುತ್ತವೆ. ಜೀವನಾವಸ್ಥಗೆ ತಕ್ಕಂತೆ ಕನಸು, ಯಾವುದೋ ಯೋಚನೆಯಲ್ಲಿ ಮಲಗಿದಾಗ ಅದೇ ಸಂಬಂಧದ ಕನಸು. ತರುಣ-ತರುಣಿಯರಿಗೆ ತಮ್ಮ ಪ್ರಿಯತಮ/ಪ್ರಿಯತಮೆಯ ಕನಸು, ಆಟಗಾರನಿಗೆ ತನ್ನಾಟದಲ್ಲಿ ಜಗವನ್ನೇ ಗೆದ್ದ ಕನಸು, ಅಮ್ಮನಿಗೆ ಮಗ ರಾಜಕುಮಾರನಾಗುವ ಕನಸು, ಅಪ್ಪನಿಗೆ ಮಗಳ ಮದುವೆಯ ಕನಸು, ಗುರುಗಳಿಗೆ ತಮ್ಮ ಶಾಲೆಯ ಹೆಸರನ್ನು ರಾಂಕ್ ಪಟ್ಟಿಯಲ್ಲಿ ಕನಸು, ಪೀಡಿತ ಗಂಡನಿಗೆ ಹೆಂಡತಿಯ ಲಟ್ಟಣಗೆಯ ಕನಸು, ಕುಡುಕ ಗಂಡ ಗಟಾರದಲ್ಲಿ ಮಲಗಿರುವಂತೆ ಆ ದುಃಖಿತ ಗೃಹಿಣಿಯ ಕನಸು, ಅವಿಭಕ್ತಕುಟುಂಬದ ಹಿರಿಯರಿಗೆ ಕನಸಲ್ಲಿ ’ನಮ್ಮ ಸಂಸಾರ ಆನಂದ ಸಾಗರ’ ಹಾಡುವ ಕನಸು, ಕವಿಗೆ ಜ್ಞಾನಪೀಠದ ಕನಸು, ಹನ್ನೆರಡನೇ ತರಗತಿ ಪರೀಕ್ಷೆಗಳ ನಂತರ ವಿದ್ಯಾರ್ಥಿಗೆ ಮೆಡಿಕಲ್/ಇಂಜನೀರಿಂಗ್ ಕಾಲೇಜು ಹೊಕ್ಕಂತೆ ಕನಸು, ವಿಜ್ಞಾನಿಗೆ ನೋಬೆಲ್ ಕನಸು, ಬಾಲನಿಗೆ ಹೊಸ ಸೈಕಲ್ ಬೆಲ್ ಹೊಡೆಯುವ ಕನಸು, ರಾಜಕಾರಣಿಗೆ ಮೇಲಿನ ಕುರ್ಚಿಯ ಕನಸು, ಅಧಿಕಾರಿಗೆ ಬಂಗಲೆ ಕಾರಿನ ಕನಸು, ನಟನಿಗೆ ಆಸ್ಕರ್ ಕನಸು, ವಿಟನಿಗೆ ಸನ್ನಿ ಕನಸು...!!

ಅಬ್ಬಬ್ಬಬ್ಬಾ...ಕನಸು ಎಂತೆಂತಹಾ ಮನಸುಗಳ ಕನ್ನಡಿ..ಅಲ್ಲವೇ..?
ನಿಮಗೆ ಬಿದ್ದ (ಒದೆದು ಹೋಗದಿದ್ದರೆ) ಕನಸನ್ನು ನೆನಪಿಸಿಕೊಂಡು ಬರೆದಿಡಿ.. ಸಮಯವಾದರೆ ಮತ್ತು ನಿಮಗೆ ಸೂಕ್ತ ಎನಿಸಿದರೆ ನಮ್ಮೊಂದಿಗೆ ಹಂಚಿಕೊಳ್ಳಿ.      

Friday, March 27, 2015

ಹತ್ತೋದಂದ್ರೆ ಏನ್ಲಾ...??