ಮಳೆ ಬಂದು ನಿಂತ ಮೇಲೆ ಎಲ್ಲ ತಣ್ಣಗಾಗಿದೆ...
ಮರವೂ ಇಲ್ಲ ಹನಿಯೂ ಇಲ್ಲ ಎಲ್ಲಾ ಬೋಳಾಗಿದೆ...
ಬಿದ್ದ ಹನಿಗೆ ಗುದ್ದು ತಿಂದ ಮಣ್ಣು ಅಲುಗಾಡಿದೆ
ಶುಭ್ರ ಹರಿವನದಿ ಬೆಟ್ಟದಿಂದ ಬಗ್ಗಡ ಹೊತ್ತು ಹೊರಟಿದೆ
ದಾರಿಯಲ್ಲಿ ಸಿಕ್ಕಿಬಿದ್ದೆ ಹನಿಬಿತ್ತು ತಲೆಯಮೇಲೆ
ತಣ್ಣನೆಯ ಅನುಭವ ಇಲ್ಲ ಬರಬಹುದೇ ಖಾಯಿಲೆ
ಗಾಳಿಯಲ್ಲಿ ತೇಲುತಿದ್ದ ಧೂಳು ಕ್ರಿಮಿ ಇತ್ತುಮೊದಲೆ
ನಮ್ಮ ಗೋರಿ ನಾವೇ ತೋಡಿ ಅತ್ತು ಕರೆವ ಮೊದಲೇ
ಪರಿಸರ ನೋಡಲಿಲ್ಲ ಹುಚ್ಚು, ಬರೀ ಸರ-ವೇ ಕಂಡಿತಲ್ಲ
ಡಾಂಬರು ಹಚ್ಚಲು ಮರವ ಉರುಳಿಸಿ ಹಣ್ಣ ಬಯಸು ಸಲ್ಲ
ಹಾದಿ ಬದಿಲಿ ಬಾಯಾರಿ ಬರಲು ನೀರು ಬೇಡ ನೆರಳೂ ಇಲ್ಲ
ಆಳುದ್ದ ಬಾವಿ ಬಲು ನೀರು, ಈಗ ತೋಡಿ ಬರೀ ಬೆವರೇ ಎಲ್ಲಾ
ಪಾತಾಳ ಸೇರೆ ಬಾವಿ ಬೋರು, ನೀರಿಲ್ಲ ಮಗುವೇ ಬಿದ್ದಿತಲ್ಲಾ
ಕಾಡ ಕಡಿದು ಹಲ-ಹಲಗೆ ಮಾಡಿ, ಬೇಟೆಯಾಡಿ ಕೊಂದೆವು
ಹುತ್ತ ಹೊಡೆದು ಹಾವ ಸಿಗಿದು ಚೀಲಮಾಡಿ ಬೆಲ್ಟು ಮಾಡಿಕೊಂಡೆವು
ಹೊಲದಲಿ ಹೆಗ್ಗಣ ಪಿಡುಗಿಗೆ ಸುಲಭವೆಂದು ಪಾಶಾಣ ಹಾಕಿ ಕೊಂದೆವು
ಸೊಳ್ಳೆ ನೊಣ ಕ್ರಿಮಿ ಕೀಟಕೆ ಎಂಡೋಸಲ್ಫಾನ್ ಡಿ.ಡಿ.ಟಿ ತಂದೆವು
ಕಲುಷಿತ ಹುಲ್ಲು, ಗೋವಿನ ಹಾಲು, ತಾಯ ಮೊಲೆಗೂ ಕೊಟ್ಟೆವು
ಇದ್ದುದರಲ್ಲಿ ತೃಪ್ತಿಪಡುವ ಮನಸೇಕೆ ಇಲ್ಲದಾಗಿದೆ ?
ಜಾತಿ ಮತ, ಹಣ-ಅಧಿಕಾರದಾಸೆ ಏಕೆ ಪ್ರಧಾನವಾಗಿದೆ?
ನನ್ನಜನ, ನನ್ನ ಮನೆ, ನನ್ನಮಕ್ಕಳು ಕೊನೆಗೆ ನಾನೇ ಏಕಾಗಿದೆ?
ತಾನೇ ಎಂದು ಮೆರೆದವರು ಮಣ್ಣಾದರೆಂದು ಏಕೆ ತಿಳಿಯದಾಗಿದೆ?